ಮುಂಬೈ: ನಿಷೇಧಿತ ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ(ಎಫ್ಡಿಎ) ನೀಡಿದ ನೋಟಿಸ್ಗೆ ಮೂವರು ನಟರು ಉತ್ತರಿಸಿದ್ದಾರೆ ಎಂದು ಬುಧವಾರ(ಸೆ. 30) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಫ್ಡಿಎ ಕಮಿಷನರ್ ತುಕರಾಮ್ ಮುಂಡೆ, ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಮೂವರಿಂದಲೂ ಪ್ರತಿಕ್ರಿಯೆಗಳು ಬಂದಿವೆ. ಅವರಲ್ಲಿ ಇಬ್ಬರು ವಿಚಾರಣೆಗೆ ಕೋರಿದ್ದರು. ನಿನ್ನೆ ಅವರ ವಿಚಾರಣೆ ಪೂರ್ಣಗೊಂಡಿದ್ದು, ನಾವು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಿಷೇಧಿಸಲ್ಪಟ್ಟಿರುವ 'ಪಾನ್ ಮಸಾಲಾ' ಉತ್ಪನ್ನವನ್ನು ವಿಮಲ್ ಎಲಾಚಿ ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಎಫ್ಡಿಎ ಮೂವರಿಗೂ ನೋಟಿಸ್ ನೀಡಿತ್ತು. ಇನ್ನೂ ವಿಚಾರಣೆ ಕೋರಿದ ಆ ಇಬ್ಬರು ನಟರು ಯಾರು ಎಂಬುದನ್ನು ಎಫ್ಡಿಎ ಬಹಿರಂಗಪಡಿಸಿಲ್ಲ.
2024ರಲ್ಲಿ ಮೂವರು ಬಾಲಿವುಡ್ ನಟರು ವಿಮಲ್ ಕಂಪನಿಯ ವಿಮಲ್ ಎಲಾಚಿ ಕಣ ಕಣದಲ್ಲು ಕೇಸರಿ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತಿನಲ್ಲಿ ಬಳಸಲಾದ 'ವಿಮಲ್ ಎಲಾಚಿ ಎನ್ನುವ ಪದವು ವಿಮಲ್ ಪಾನ್ ಮಸಾಲದ ಜೊತೆ ನಂಟು ಕಲ್ಪಿಸುವ ರೀತಿಯಲ್ಲಿ ಬಳಕೆಯಾಗಿದೆ. ಇದು ಗ್ರಾಹಕರನ್ನು ತಪ್ಪು ದಾರಿಗೆಳೆಯಬಹುದು. ನಿಷೇಧಿತ ಉತ್ಪನ್ನದ ಬ್ರ್ಯಾಂಡ್ ಗುರುತನ್ನು ಪರೋಕ್ಷವಾಗಿ ಪ್ರಚಾರ ಮಾಡಲಾಗಿದೆ ಮೂವರಿಗೆ ಎಫ್ಡಿಎ ನೋಟಿಸ್ ನೀಡಿತ್ತು (ಏಜೆನ್ಸೀಸ್).