Cauvery Issue | ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಮ್ಮತಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ, ಆರ್ ಅಶೋಕ್ ವಾಗ್ದಾಳಿ 
ದೇಶ

ಕರ್ನಾಟಕಕ್ಕೆ ಮಾರಿ, ತಮಿಳುನಾಡಿಗೆ ಉಪಕಾರಿ!...ಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ, ಆರ್ ಅಶೋಕ್ ವಾಗ್ದಾಳಿ | Cauvery Issue

ಮೈಸೂರು: ಕಾವೇರಿ ನೀರನ್ನು (Cauvery Issue) ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು ಮನೆಗೆ ಮಾರಿ ಊರಿಗೆ ಉಪಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಹಾಗೂ ರಾಜ್ಯ ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರ ಈಗಾಗಲೇ ಕದ್ದು ಮುಚ್ಚಿ ತಮಿಳುನಾಡಿಗೆ ಅಪಾರ ಪ್ರಮಾಣದ ನೀರು ಹರಿಸಿದೆ ಎಂದು ಆರೋಪಿಸಿದ ಬಿವೈವಿ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ನೀರು ಬಿಟ್ಟಿದ್ದೇಕೆ..? ಟ್ರಿಬ್ಯುನಲ್ ಮುಂದೆ ಸರಿಯಾದ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ಸರ್ಕಾರ ವಿಷ ಹಾಕಿದೆ. ರಾಜ್ಯ ಸರ್ಕಾರಕ್ಕೆ ರೈತರ ಹಿತಾಸಕ್ತಿ ಆದ್ಯತೆಯಾಗಿ ಉಳಿದಿಲ್ಲ ಎಂದು ದೂರಿದರು.

ಸಂಪುಟ ವಿಸ್ತರಣೆ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ಸಂಪುಟ ವಿಸ್ತರಣೆ ವಿಚಾರವನ್ನು ಪ್ರಸ್ತಾಪಿಸಿದ ವಿಜಯೇಂದ್ರ, ಕಳೆದ ಒಂದು ತಿಂಗಳಿನಿಂದ ಸರ್ಕಾರ ಬರಿ ಸಂಪುಟ ಸರ್ಕಸ್‌ನಲ್ಲೇ ಮುಳುಗಿದೆ. ರೇಟ್ ಫಿಕ್ಸ್ ಆಗುವವರೆಗೂ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಯಾಗುವುದಿಲ್ಲ. ನಾಯಕರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿವೆ. ಯಾರನ್ನೋ ಓಲೈಸಿಕೊಳ್ಳಲು ಕರ್ನಾಟಕದ ರೈತರನ್ನು ಬಲಿ ಕೊಡಲಾಗುತ್ತಿದೆ, ಆದರೆ ಬಿಜೆಪಿ ಎಂದಿಗೂ ರೈತರ ಪರವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೆ ಮಾರಿ ತಮಿಳುನಾಡಿಗೆ ಉಪಕಾರಿ: ಆರ್. ಅಶೋಕ್

ಇದೇ ವಿಷಯವಾಗಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ಮತ್ತೊಮ್ಮೆ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ಭೀಕರ ಬರಗಾಲದ ನಡುವೆಯೂ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ನೀರು ಬಿಡಲು ಶರಣಾಗಿದೆ. ಕರ್ನಾಟಕಕ್ಕೆ ಮಾರಿ, ತಮಿಳುನಾಡಿಗೆ ಉಪಕಾರಿಯಾಗುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಪಕ್ಷ ನಾಯಕರು, ರಾಜ್ಯದ ಪರ ಸಮರ್ಥ ವಾದ ಮಂಡಿಸಲು ಸಿದ್ಧರಾಗಿ ಎಂದು ಎಷ್ಟು ಬಾರಿ ಎಚ್ಚರಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರು ಕಾವೇರಿಯ ಮಡಿಲನ್ನು ಬರಿದು ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆಯಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಾಡಿದ ತಪ್ಪಿನಿಂದ ಜಲಾಶಯಗಳು ಬರಿದಾಗಿದ್ದು, ಕನ್ನಡಿಗರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
ಹೈಕಮಾಂಡ್ ಮುಲಾಜಿಗೆ ಬಿದ್ದು, ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಟಿವಿಕೆ ಸರ್ಕಾರವನ್ನು ಮೆಚ್ಚಿಸಲು ನೀರು ಬಿಟ್ಟರೆ ಜನ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಸಿದ ಅಶೋಕ್, ಸರಿಯಾದ ಅಂಕಿ-ಅಂಶಗಳ ಸಮೇತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಮುಖ್ಯಮಂತ್ರಿಗಳು ತಕ್ಷಣವೇ ಅಧಿಕಾರಿಗಳು ಮತ್ತು ವಕೀಲರ ಸಭೆ ಕರೆದು, ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯದಿಂದ ಒಂದು ಹನಿ ನೀರೂ ಹೊರಹೋಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.