Vijay Oath Taking 
ದೇಶ

"ಕೈ" ಹಿಡಿದು ಗದ್ದುಗೆ ಏರಲಿದ್ದಾರೆ ದಳಪತಿ!...ನಾಳೆ ಬೆಳಿಗ್ಗೆ 11. 30ಕ್ಕೆ ಸಿಎಂ ಆಗಿ ವಿಜಯ್ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ | Vijay Oath Taking

Vijay Oath Taking: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಮೈತ್ರಿ ಯುಗಾರಂಭವಾಗಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚಿಸಲು ಕಾಂಗ್ರೆಸ್ ಅಧಿಕೃತವಾಗಿ ತನ್ನ ಬೆಂಬಲವನ್ನು ಘೋಷಿಸಿದೆ. ಮಂಗಳವಾರದಂದು ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ತಮಿಳುನಾಡು ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರು ವಿಜಯ್ ಅವರನ್ನು ಭೇಟಿ ಮಾಡಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. 
ಈ ಬೆಂಬಲವು ಷರತ್ತುಬದ್ಧವಾಗಿದ್ದು, ಮೈತ್ರಿಕೂಟದಿಂದ ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲದ ಕೋಮುವಾದಿ ಶಕ್ತಿಗಳನ್ನು ಹೊರಗಿಡಬೇಕು ಎಂದು ಕಾಂಗ್ರೆಸ್ ಕಟ್ಟುನಿಟ್ಟಾಗಿ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಬೆಳಿಗ್ಗೆ 11. 30ಕ್ಕೆ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ರಾಹುಲ್​ ಗಾಂಧಿಗೆ ಆಹ್ವಾನ...

ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲು ನಟ ವಿಜಯ್ ಅವರು, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ ಎಂದು ಕೈ ಮುಖಂಡ ಪ್ರವೀಣ್ ಚಕ್ರವರ್ತಿ ತಿಳಿಸಿದ್ದಾರೆ. ವಿಜಯ್​ರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರಕ್ಕೆ ಅಧಿಕೃತ ಒಪ್ಪಿಗೆ ನೀಡಿದ ತಕ್ಷಣ ರಾಹುಲ್ ಗಾಂಧಿ ಚೆನ್ನೈ ಭೇಟಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೈತ್ರಿಯು ಕೇವಲ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ತಮಿಳುನಾಡಿನ ಯುವಜನತೆಯ ಕನಸುಗಳನ್ನು ನನಸು ಮಾಡಲು ಮತ್ತು ಕೋಮುವಾದಿ ಶಕ್ತಿಗಳನ್ನು ದೂರವಿಟ್ಟು ಪ್ರಗತಿಪರ ಆಡಳಿತ ನೀಡಲು ರೂಪಿತವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಸಂಖ್ಯಾಬಲದ ಲೆಕ್ಕಾಚಾರ

ಪ್ರಸ್ತುತ ಟಿವಿಕೆ 108 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್‌ನ 5 ಶಾಸಕರ ಬೆಂಬಲದೊಂದಿಗೆ ಈ ಸಂಖ್ಯೆ 113ಕ್ಕೆ ಏರಲಿದೆ (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ). 118ರ ಬಹುಮತದ ಗಡಿ ತಲುಪಲು ಇನ್ನು 5 ಶಾಸಕರ ಬೆಂಬಲ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜಯ್ ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಪಕ್ಷಗಳು ಬೆಂಬಲ ನೀಡಿದರೆ ಟಿವಿಕೆ ಸಂಖ್ಯಾಬಲ 119ಕ್ಕೇರಲಿದ್ದು, ಸರ್ಕಾರ ರಚನೆ ಸಾಧ್ಯವಾಗಲಿದೆ.

ಚುನಾವಣಾ ಫಲಿತಾಂಶ

ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದ ಟಿವಿಕೆ ಅತಿದೊಡ್ಡ ಪಕ್ಷವಾದರೆ, ದಶಕಗಳ ಕಾಲ ರಾಜ್ಯವಾಳಿದ ಡಿಎಂಕೆ ಕೇವಲ 59 ಸ್ಥಾನಗಳಿಗೆ ಕುಸಿದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದರೆ, ಪಿಎಂಕೆ 4 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಿಂಗ್ ಮೇಕರ್ ಪಾತ್ರಕ್ಕೆ ಸಜ್ಜಾಗಿದೆ. ಈ ಎಲ್ಲಾ ಬೆಳವಣಿಗೆಗಳು ತಮಿಳುನಾಡಿನಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದ್ದು, ವಿಜಯ್ ರಾಜಕೀಯ ಹಾದಿಗೆ ಕಾಂಗ್ರೆಸ್‌ನ ಬೆಂಬಲವು ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ(ಏಜೆನ್ಸೀಸ್​​).