1 ಕೋಟಿ ರೂ. ಕ್ಯಾಶ್​, ಲಕ್ಸುರಿ ವಾಚ್‌ಗಳ ರಾಶಿ... ಅಧಿಕಾರಿ ದಂಪತಿಯ ಮನೆಯಲ್ಲಿ ಸಿಕ್ಕ ಆಸ್ತಿ ಕಂಡು ವಿಜಿಲೆನ್ಸ್ ತಂಡವೇ ಶಾಕ್  
ದೇಶ

1 ಕೋಟಿ ರೂ. ಕ್ಯಾಶ್​, ಲಕ್ಸುರಿ ವಾಚ್‌ಗಳ ರಾಶಿ... ಅಧಿಕಾರಿ ದಂಪತಿಯ ಮನೆಯಲ್ಲಿ ಸಿಕ್ಕ ಆಸ್ತಿ ಕಂಡು ವಿಜಿಲೆನ್ಸ್ ತಂಡವೇ ಶಾಕ್ | Bureaucrat Couple

ಪಾಟ್ನಾ ಮತ್ತು ಬೇಗುಸರಾಯ್‌ನ ಅನೇಕ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತು. ಈ ವೇಳೆ, ನಗದು, ಚಿನ್ನಾಭರಣಗಳು, ಅಪಾರ ಮೌಲ್ಯದ ಆಸ್ತಿ, ಬ್ಯಾಂಕ್ ಖಾತೆಗಳು, ಹೂಡಿಕೆಗಳು ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಾಟ್ನಾ: ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳಾಗಿರುವ ದಂಪತಿಯ (Bureaucrat Couple) ಮನೆಯನ್ನು ರೇಡ್​ ಮಾಡಿದ ವಿಜಿಲೆನ್ಸ್ ತಂಡಕ್ಕೆ ಬರೋಬ್ಬರಿ 1 ಕೋಟಿ ರೂ. ನಗದು, ಚಿನ್ನಾಭರಣ, ಆಸ್ತಿ ಪತ್ರಗಳು ಮತ್ತು ದುಬಾರಿ ಮೌಲ್ಯದ ವಾಚ್‌ಗಳು ಸೇರಿದಂತೆ ಲೆಕ್ಕಕ್ಕೆ ಸಿಗದ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ದಿವಾಕರ್ ಮತ್ತು ಅವರ ಪತ್ನಿ ಡಾಣಾಪುರದ ಜಿಲ್ಲಾ ಸಬ್ ರಿಜಿಸ್ಟ್ರಾರ್ ಕುಮಾರಿ ಸ್ವೀಟಿ ನಿವಾಸದ ಮೇಲೆ ಸೋಮವಾರ ಬಿಹಾರ ವಿಜಿಲೆನ್ಸ್ ಬ್ಯೂರೋದ ತಂಡಗಳು, ಪಾಟ್ನಾ ಮತ್ತು ಬೇಗುಸರಾಯ್‌ನ ಅನೇಕ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತು. ಈ ವೇಳೆ, ನಗದು, ಚಿನ್ನಾಭರಣಗಳು, ಅಪಾರ ಮೌಲ್ಯದ ಆಸ್ತಿ, ಬ್ಯಾಂಕ್ ಖಾತೆಗಳು, ಹೂಡಿಕೆಗಳು ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಎನ್​ಡಿಟಿವಿ ವರದಿ ಪ್ರಕಾರ, ವಶಪಡಿಸಿಕೊಂಡ ನಗದು ಎಷ್ಟಿದೆ ಎಂದು ಅಧಿಕಾರಿಗಳ ಕಣ್ಣೆದುರಿಗೆ ಲೆಕ್ಕಹಾಕಲು ಹಣ ಎಣಿಸುವ ಯಂತ್ರವನ್ನು ತರಿಸಿಕೊಂಡರು. ವಿಜಿಲೆನ್ಸ್ ಇಲಾಖೆಯ ತಂಡ ನಗದು, ಚಿನ್ನಾಭರಣ ಮತ್ತಿತರ ದಾಖಲೆಗಳನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಿದೆ. ವಶಪಡಿಸಿಕೊಂಡ ನಗದು ಮತ್ತು ಚಿನ್ನಾಭರಣಗಳ ನಿಖರವಾದ ಪ್ರಮಾಣ ಮತ್ತು ಮೌಲ್ಯವು ತನಿಖೆ ಮುಗಿದ ನಂತರವಷ್ಟೇ ಬಹಿರಂಗಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಪಾಟ್ನಾದ ನಿವಾಸ ಮಾತ್ರವಲ್ಲದೆ ಬೇಗುಸರಾಯ್‌ನಲ್ಲಿರುವ ಅವರ ಪೂರ್ವಜರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಇಲ್ಲಿಯವರೆಗೆ, ಪಾಟ್ನಾ ಮತ್ತು ಬೇಗುಸರಾಯ್‌ನಲ್ಲಿರುವ ದಂಪತಿಗಳ ನಿವಾಸಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು ಮತ್ತು ಐಷಾರಾಮಿ ವಾಚ್‌ಗಳ ಜತೆಗೆ 1 ಕೋಟಿ ರೂಪಾಯಿಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಎಲ್ಲೆಲ್ಲಿ ಏನೆಲ್ಲ ಆಸ್ತಿ ವಶಕ್ಕೆ?

  • ಪಾಟ್ನಾ (ಸ್ಥಳ): 70 ಲಕ್ಷ ನಗದು ಮತ್ತು 6 ಲಕ್ಷ ರೂ. ಮೌಲ್ಯದ 48 ವಾಚ್‌ಗಳು

  • ಬೇಗುಸರಾಯ್‌: 9 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು

  • ಎರಡೂ ಸ್ಥಳಗಳಿಂದ ಭೂಮಿ ಮತ್ತು ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ವಶಕ್ಕೆ

  • ಪಾಟ್ನಾದಲ್ಲಿ ಎರಡು ಫ್ಲಾಟ್‌ಗಳನ್ನು ಖರೀದಿ

  • ಪಾಟ್ನಾದಲ್ಲಿ ಮೂರು ನಿವೇಶನಗಳ ಸ್ವಾಧೀನ

ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಕಾರ್ಯಾಚರಣೆ ಮುಗಿದ ನಂತರ, ಅಕ್ರಮ ಆಸ್ತಿ ಹೊಂದಿರುವ ಆರೋಪಗಳು ಸಾಬೀತಾದರೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸುತ್ತಾರೆ. ಸದ್ಯ ತನಿಖೆ ಚುರುಕಿನಿಂದ ಸಾಗುತ್ತಿದ್ದು, ಅಂತಿಮ ಪರಿಶೀಲನೆ ಬಳಿಕವೇ ಎಷ್ಟು ಮೊತ್ತದ ಅಕ್ರಮ ಆಸ್ತಿಯಿದೆ ಎಂಬುದನ್ನು ಸ್ಪಷ್ಟಪಡಿಸಲಾಗುವುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).