ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ 
ದೇಶ

ಯುವಕನಿಗೆ ಕಪಾಳಮೋಕ್ಷದ ವಿಡಿಯೋ; ಬಿಜೆಪಿ ಸಚಿವ ಪರ್ವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು |Parvesh Verma

ಪಶ್ಚಿಮ ದೆಹಲಿಯ ತಿಲಕ್ ನಗರದ ವಿಕಾಸಪುರಿ ಪ್ರದೇಶದಲ್ಲಿ ಕಳಪೆ ರಸ್ತೆ ಕಾಮಗಾರಿ ತಪಾಸಣೆ ವೇಳೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ವಿರುದ್ಧ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ.

ನವದೆಹಲಿ: ಪಶ್ಚಿಮ ದೆಹಲಿಯ ತಿಲಕ್ ನಗರದ ವಿಕಾಸಪುರಿ ಪ್ರದೇಶದಲ್ಲಿ ಕಳಪೆ ರಸ್ತೆ ಕಾಮಗಾರಿ ತಪಾಸಣೆ ವೇಳೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ವಿರುದ್ಧ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ.

ಕಪಾಳಮೋಕ್ಷಕ್ಕೆ ಗುರಿಯಾಗಿರುವ ಸಾಹೇಬ್ ಸಿಂಗ್ ಅವರ ದೂರು ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳಪೆ ರಸ್ತೆ ಕಾಮಗಾರಿ ಕುರಿತು ದೂರು ಬಂದ ಹಿನ್ನೆಲೆ ಭಾನುವಾರ(ಸೆ. 27) ಆಪ್ ಶಾಸಕ ಜರ್ನೈಲ್ ಸಿಂಗ್ ಅವರೊಂದಿಗೆ ಸೇರಿ ಪರ್ವೇಶ್ ವರ್ಮಾ ಅವರು ರಸ್ತೆ ಪರಿಶೀಲನೆ ನಡೆಸುತ್ತಿದ್ದರು.

ಈ ವೇಳೆ ಜರ್ನೈಲ್ ಸಿಂಗ್ ಅವರು ರಸ್ತೆಯ ಮೇಲ್ಭಾಗದ ಕೆಲ ಭಾಗಗಳನ್ನು ಕೈಯಿಂದಲೇ ಕಿತ್ತು ತೆಗೆದು, ಅದರ ನಿರ್ಮಾಣದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾಹೇಬ್ ಸಿಂಗ್ ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದನು. ಆ ವೇಳೆ ಸಚಿವರು ಏಕಾಏಕಿ ಆತನ ಕಪಾಳಕ್ಕೆ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ಸಾಹೇಬ್ ಸಿಂಗ್ ಸಚಿವರ ವಿರುದ್ಧ ದೂರು ನೀಡಿದ್ದರು. ಸಚಿವರು ತಮ್ಮನ್ನು ಥಳಿಸಿದ್ದಲ್ಲದೆ, ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಬೆದರಿಸಿದ್ದಾರೆ ಎಂದು ಸಾಹಿಬ್ ಸಿಂಗ್ ಆರೋಪಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆಪ್ ಮಧ್ಯ ರಾಜಕೀಯ ವಾಗ್ವಾದ ನಡೆದಿದೆ.

ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ಪರ್ವೇಶ್ ವರ್ಮಾ ಅವರು, ಜರ್ನೈಲ್ ಸಿಂಗ್ ರಸ್ತೆ ಗುತ್ತಿಗೆದಾರರಿಂದ ಕಮಿಷನ್ ಪಡೆಯಲು ಯತ್ನಿಸಿದ್ದಾರೆ. ಎಎಪಿ ಪ್ರಸಾರ ಮಾಡುತ್ತಿರುವ ವೀಡಿಯೊ ಘಟನೆಯ ಸಂಪೂರ್ಣ ಸಂದರ್ಭವನ್ನು ತೋರಿಸುವುದಿಲ್ಲ. ಸಾಹೇಬ್ ಸಾಮಾನ್ಯ ವ್ಯಕ್ತಿಯಲ್ಲ ಆತ ಆಪ್ ಕಾರ್ಯಕರ್ತ. ನನ್ನ ಕುಟುಂಬವನ್ನು ನಿಂದಿಸಿದ್ದರಿಂದ ನಾನು ಹಲ್ಲೆ ಮಾಡಬೇಕಾಯಿತು ಎಂದು ಹೇಳಿದ್ದಾರೆ (ಏಜೆನ್ಸೀಸ್).