ರಾಹುಲ್ ಗಾಂಧಿ 
ದೇಶ

ಯುವಕನಿಗೆ ಸಚಿವ ಪರ್ವೇಶ್ ವರ್ಮಾ ಕಪಾಳಮೋಕ್ಷದ ವಿಡಿಯೋ; ಮತಗಳ್ಳತನದ ದುರಹಂಕಾರ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ಅವರು ರಸ್ತೆ ತಪಾಸಣೆ ವೇಳೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಮತಗಳ್ಳತನವು ಚುನಾವಣಾ ಫಲಿತಾಂಶವನ್ನು ಮಾತ್ರವಲ್ಲ, ದುರಹಂಕಾರವನ್ನು ಸಹ ಕೊಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ಅವರು ರಸ್ತೆ ತಪಾಸಣೆ ವೇಳೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಮತಗಳ್ಳತನವು ಚುನಾವಣಾ ಫಲಿತಾಂಶವನ್ನು ಮಾತ್ರವಲ್ಲ, ದುರಹಂಕಾರವನ್ನು ಸಹ ಕೊಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ದೆಹಲಿಯ ಬಿಜೆಪಿ ಸರ್ಕಾರದ ಸಚಿವರೊಬ್ಬರು ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋವೊಂದರಲ್ಲಿ ಕಂಡುಬಂದಿದೆ. ಅವರು ಮಾಡಿದ ತಪ್ಪೇನು? ವಿಡಿಯೋ ಚಿತ್ರೀಕರಿಸುತ್ತಿದ್ದರು. ಸಚಿವರ ಸಮ್ಮುಖದಲ್ಲಿ ರಸ್ತೆಯೊಂದನ್ನು ಅಗೆಯುವ ಪ್ರಕ್ರಿಯೆಯನ್ನು ಪ್ರದರ್ಶಿಸಲಾಗುತ್ತಿತ್ತು ಮತ್ತು ಆ ಯುವಕ ಕ್ಯಾಮೆರಾ ಹಿಡಿದುಕೊಂಡಿದ್ದನು.

ಇದು ಮತದಾರರಿಗೆ ಇನ್ನು ಮುಂದೆ ಕಿಂಚಿತ್ತೂ ಹೆದರದ ಆಡಳಿತ ವ್ಯವಸ್ಥೆಯ ನೈಜ ಮುಖವಾಗಿದೆ. ಬೀದಿಯಲ್ಲಿ ಪ್ರಶ್ನೆ ಕೇಳಿದರೆ, ಚೆನ್ನಾಗಿ ಏಟು ತಿನ್ನಬೇಕಾಗುತ್ತದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕೇಳಿದರೆ, ಲಾಠಿಚಾರ್ಜ್‌ಗೆ ಗುರಿಯಾಗಬೇಕಾಗುತ್ತದೆ. ಸಂಸತ್ತಿನಲ್ಲಿ ಪ್ರಶ್ನೆ ಕೇಳಿದರೆ, ನಿಮ್ಮ ಮೈಕ್ ಅನ್ನು ಆಫ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದು, ಅವರು ಹೀಗೆ ಮಾಡಲು ಕಾರಣವೇನೆಂದರೆ, ಅಧಿಕಾರ ಕಳೆದುಕೊಳ್ಳುವ ಭಯ ಅವರಿಗಿಲ್ಲ. ಕದ್ದ ಮತಗಳು ಕೇವಲ ಚುನಾವಣಾ ಫಲಿತಾಂಶವನ್ನಷ್ಟೇ ಅಲ್ಲ, ಅದರೊಂದಿಗೆ ಬರುವ ಅಹಂಕಾರವನ್ನೂ ತೋರಿಸುತ್ತದೆ. ಗೆಲುವು ಖಚಿತವೆಂದು ಭಾವಿಸುವ ಸರ್ಕಾರಕ್ಕೆ ನಿಮ್ಮ ಸಮ್ಮತಿಯ ಅಗತ್ಯವಿರುವುದಿಲ್ಲ. ಅದಕ್ಕೆ ಬೇಕಾಗಿರುವುದು ನಿಮ್ಮ ಮೌನ ಮತ್ತು ಅಂಧಭಕ್ತಿ ಮಾತ್ರ ಎಂದಿದ್ದಾರೆ.

ಕಳಪೆ ರಸ್ತೆ ಕಾಮಗಾರಿ ಕುರಿತು ದೂರು ಬಂದ ಹಿನ್ನೆಲೆ ಆಪ್ ಶಾಸಕ ಜರ್ನೈಲ್ ಸಿಂಗ್ ಅವರೊಂದಿಗೆ ಸೇರಿ ಪರ್ವೇಶ್ ವರ್ಮಾ ಅವರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಜರ್ನೈಲ್ ಸಿಂಗ್ ಅವರು ರಸ್ತೆಯ ಮೇಲ್ಭಾಗದ ಕೆಲ ಭಾಗಗಳನ್ನು ಕೈಯಿಂದಲೇ ಕಿತ್ತು ತೆಗೆದು, ಅದರ ನಿರ್ಮಾಣದ ಬಗ್ಗೆ ಪ್ರಶ್ನಿಸಿದ್ದಾರೆ. ಹತ್ತಿರದಲ್ಲಿ ನಿಂತಿದ್ದ ಯುವಕನೊಬ್ಬ ಪರಿಶೀಲನೆಯನ್ನು ತನ್ನ ಮೊಬೈಲ್​ನಲ್ಲಿ ರೆಕಾರ್ಡ್ ಮಾಡುತ್ತಿದ್ದಾಗ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).