ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ (Vande Mataram) ಗೀತೆಯ ಗಾಯನವು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರವು ವಂದೇ ಮಾತರಂನ ಆರು ಚರಣಗಳ ಪೂರ್ಣ ಆವೃತ್ತಿಯ ಪ್ರದರ್ಶನವನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ತಿಂಗಳುಗಳ ಬಳಿಕ ಈ ಹೊಸ ಸಂಪ್ರದಾಯ ಆರಂಭವಾಗಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಗೀತೆಗೂ ಮೊದಲು ಆ ಹಾಡನ್ನು ಪೂರ್ಣವಾಗಿ ನುಡಿಸಲಾಯಿತು.
ಸ್ವತಂ ಬಂಗಾಳದಲ್ಲೇ ತಾತ್ಸಾರ!..
1882 ರಲ್ಲಿ ಖ್ಯಾತ ಬಂಗಾಳಿ ಲೇಖಕ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ ಈ ಹಾಡನ್ನು ಶನಿವಾರ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನುಡಿಸಲಾಗಿಲ್ಲ. ವಿಶೇಷವೆಂದರೆ ಆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಇತರ ಹಲವಾರು ಕೇಂದ್ರ ಸಚಿವರು ಉಪಸ್ಥಿತರಿದ್ದರು.
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರಗೀತೆಯ ಕುರಿತು ಹೊರಡಿಸಿದ್ದ ಈ ನಿರ್ದೇಶನವು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದವು. ಆದರೆ, ಇಂದಿನ ಚೆನ್ನೈನ ಸಮಾರಂಭದಲ್ಲಿ ರಾಹುಲ್ ಗಾಂಧಿ ಮತ್ತು ಸಿಎಂ ವಿಜಯ್ ಸಮ್ಮುಖದಲ್ಲೇ ರಾಷ್ಟ್ರಗೀತೆಗೆ ಮೊದಲು ವಂದೇ ಮಾತರಂ ಹಾಡಲಾಯಿತು. ಸಮಾರಂಭದ ಕೊನೆಯಲ್ಲಿ ವಂದೇ ಮಾತರಂ ಮತ್ತು ಜನ ಗಣ ಮನದ ಬಳಿಕ ರಾಜ್ಯ ಗೀತೆ ತಮಿಳು ಥಾಯ್ ವಾಲ್ತು ನುಡಿಸಲಾಯಿತು.
ಕೇಂದ್ರದ ಪ್ರಸ್ತಾವನೆ
ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಬಳಿಕ, ಕೇಂದ್ರ ಸಚಿವ ಸಂಪುಟವು ರಾಷ್ಟ್ರಗೀತೆ ವಂದೇ ಮಾತರಂಗೆ ರಾಷ್ಟ್ರಗೀತೆ ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನವನ್ನು ನೀಡುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಫೆಬ್ರವರಿಯಲ್ಲಿ ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಿರ್ದೇಶನವನ್ನು ರವೀಂದ್ರನಾಥ ಟ್ಯಾಗೋರ್‌ಗೆ ಮಾಡಿದ ಅವಮಾನ ಎಂದು ಕರೆದಿದ್ದರು.
ಕೇಂದ್ರ ಗೃಹ ಸಚಿವಾಲಯದ ಈ ನೂತನ ಆದೇಶವು ದಶಕಗಳಿಂದ ನಡೆದುಬಂದಿದ್ದ ಸಂಪ್ರದಾಯವನ್ನು ಬದಲಿಸಿದ್ದು, 1950ರಲ್ಲಿ ಸಂವಿಧಾನ ಸಭೆಯು ವಿವಿಧ ಸಮುದಾಯಗಳ ಭಾವನೆಗಳನ್ನು ಗೌರವಿಸಿ ಕೇವಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ ಈಗಿನ ನಿರ್ದೇಶನವು ಆರು ಚರಣಗಳ ಪೂರ್ಣ ಆವೃತ್ತಿಯನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರೀಯತೆಗೆ ಹೊಸ ಅರ್ಥ ನೀಡಿದೆ. ಈ ಎಲ್ಲ ಗದ್ದಲದ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂದು ರಾಷ್ಟ್ರೀಯತೆಯ ರಕ್ಷಕರೆಂದು ಹೇಳಿಕೊಳ್ಳುವವರು ವಂದೇ ಮಾತರಂ ಹಾಡಿಲ್ಲ ಎಂಬುದು ತೀವ್ರ ವಿಪರ್ಯಾಸ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, 1937 ರಲ್ಲಿ ವಂದೇ ಮಾತರಂನ ಸಂಕ್ಷಿಪ್ತ ಆವೃತ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಕೋಮುವಾದಿ ಕಾರ್ಯಸೂಚಿಗೆ ಒಲವು ತೋರುತ್ತಿದೆ ಎಂದು ಆರೋಪಿಸಿದೆ(ಏಜೆನ್ಸೀಸ್).