Vande Mataram Mandatory |
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ, ಅನುದಾನಿತ ಹಾಗೂ ಮಾನ್ಯತೆ ಪಡೆದ ಎಲ್ಲಾ ಮದರಸಾಗಳಲ್ಲಿ ತರಗತಿಗಳು ಆರಂಭವಾಗುವ ಮುನ್ನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ (Vande Mataram Mandatory) ಹಾಡಬೇಕು ಎಂದು ಪಶ್ಚಿಮ ಬಂಗಾಳದ ಮದರಸಾ ಶಿಕ್ಷಣ ನಿರ್ದೇಶನಾಲಯವು ಆದೇಶ ಹೊರಡಿಸಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಖುದಿರಾಮ್ ತುಡು ಈ ಪ್ರಕಟಣೆಯನ್ನು ಅಧಿಕೃತಪಡಿಸಿದ್ದಾರೆ.
ಸರ್ಕಾರದ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ತುಡು, ಸಂತಾಲಿ ಮಾಧ್ಯಮದ ಶಾಲೆಗಳು ಸೇರಿದಂತೆ ರಾಜ್ಯದ ಇತರ ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗೀತೆಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಮಾನ್ಯತೆ ಪಡೆದ ಮದರಸಾಗಳಿಗೆ ಇದರಲ್ಲಿ ಯಾವುದೇ ವಿನಾಯಿತಿ ಇರಬಾರದು ಎಂದು ಹೇಳಿದ್ದಾರೆ.
ಅಧಿಕೃತ ಅಧಿಸೂಚನೆ ಜಾರಿ
ಮದರಸಾ ಶಿಕ್ಷಣ ನಿರ್ದೇಶನಾಲಯವು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಮಾದರಿ ಮದರಸಾಗಳು, ಮಾನ್ಯತೆ ಪಡೆದ ಅನುದಾನಿತ ಮದರಸಾಗಳು, ಅನುಮೋದಿತ ಎಮ್ಎಸ್ಕೆ ಹಾಗೂ ಎಸ್ಎಸ್ಕೆಗಳು ಮತ್ತು ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳು ತಮ್ಮ ಬೆಳಗಿನ ಪ್ರಾರ್ಥನೆಯಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಈ ಹೊಸ ಆದೇಶವು ಈ ಹಿಂದಿನ ಎಲ್ಲಾ ಪದ್ಧತಿಗಳನ್ನು ರದ್ದುಗೊಳಿಸುತ್ತದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಇದನ್ನು ಜಾರಿಗೆ ತರಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಕಟಣೆಯ ಬೆನ್ನಲ್ಲೇ ಈ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ, ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶಾಲೆಗಳು ಇನ್ನು ಮುಂದೆ ತರಗತಿಗಳು ಪ್ರಾರಂಭವಾಗುವ ಮೊದಲು ತಮ್ಮ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ರಾಷ್ಟ್ರೀಯ ಗೀತೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ(ಏಜೆನ್ಸೀಸ್).