ಗೌತಮ್ ಅದಾನಿ 
ದೇಶ

ಉದ್ಯಮಿ ಗೌತಮ್ ಅದಾನಿ ವಿರುದ್ಧದ ಲಂಚ ಆರೋಪ ; ಪ್ರಕರಣ ಕೈಬಿಡಲು ನಿರಾಕರಿಸಿದ ಅಮೆರಿಕದ ಫೆಡರಲ್ ನ್ಯಾಯಾಲಯ | Gautam Adani

ನವದೆಹಲಿ: ಸೌರ ವಿದ್ಯುತ್​ ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ(Gautam Adani) ಸೇರಿ ಕಂಪನಿಯ ಹಲವರ ವಿರುದ್ಧ ಹೂಡಲಾಗಿದ್ದ ಬಹುಕೋಟಿ ರೂಪಾಯಿ ವಂಚನೆ ಮತ್ತು ಲಂಚದ ಆರೋಪದ ಪ್ರಕರಣಗಳನ್ನು ಕೊನೆಗೊಳಿಸಲು ಅಮೆರಿಕದ ಫೆಡರಲ್ ನ್ಯಾಯಾಲಯ ನಿರಾಕರಿಸಿದ್ದು, ಈ ಕುರಿತು ಪೂರ್ತಿ ವಿವರ ನೀಡುವಂತೆ ನ್ಯಾಯಾಂಗ ಇಲಾಖೆಗೆ ಆದೇಶಿಸಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು ಕಳೆದ ತಿಂಗಳು ಗೌತಮ್ ಅದಾನಿ ಇತರ ಆರೋಪಿಗಳ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ಕೈಬಿಡುವುದಾಗಿ ಘೋಷಿಸಿತ್ತು. ಈ ಸಂಬಂಧ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ನ್ಯಾಯಾಧೀಶ ನಿಕೋಲಸ್ ಜಿ. ಗರೂಫಿಸ್, ಎಂಟು ಆರೋಪಿಗಳ ವಿರುದ್ಧದ ಆರೋಪಗಳನ್ನು ವಜಾಗೊಳಿಸಲು ವಿವರವಾದ ಕಾರಣಗಳನ್ನು ವಿವರಿಸುವಂತೆ ನ್ಯಾಯಾಂಗ ಇಲಾಖೆಗೆ ಸೂಚನೆ ನೀಡಿದ್ದಾರೆ.
ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಲು ಮತ್ತು ಶಾಶ್ವತವಾಗಿ ವಜಾಗೊಳಿಸಲು ಸರ್ಕಾರವು ಪ್ರತಿಯೊಂದು ಕಾರಣವನ್ನು ಸಲ್ಲಿಸಬೇಕು. ಮತ್ತು ಆ ಕಾರಣಗಳಿಗೆ ಸಾಕಷ್ಟು ವಾಸ್ತವಿಕ ಪುರಾವೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜುಲೈ 13ರೊಳಗೆ ಈ ಬಗ್ಗೆ ವಿವರಣೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

ನವೆಂಬರ್ 2024ರಲ್ಲಿ ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿಯು ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಭಾರತದಲ್ಲಿ ಸೋಲಾರ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ (ಅಂದಾಜು 2100 ಕೋಟಿ ರೂ.) ಲಂಚ ನೀಡಲು ಅದಾನಿ ಗ್ರೂಪ್ ಸಂಚು ರೂಪಿಸಿತ್ತು ಮತ್ತು ಈ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಂಚಿಸಿದೆ ಎಂದು ಅಮೆರಿಕ ಆರೋಪಿಸಿತ್ತು.
ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ಮೊದಲಿನಿಂದಲೂ ಸಾರಾಸಗಟಾಗಿ ನಿರಾಕರಿಸುತ್ತಲೇ ಬಂದಿತ್ತು. ಆರೋಪಿಗಳು ಯಾರೂ ಅಮೆರಿಕದಲ್ಲಿ ಇರದ ಕಾರಣ ಮತ್ತು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಿಮಿನಲ್ ತನಿಖೆಯು ಸದ್ಯಕ್ಕೆ ಸ್ಥಗಿತಗೊಂಡಿತ್ತು (ಏಜೆನ್ಸೀಸ್).