ಲಖನೌ: ಉತ್ತರ ಪ್ರದೇಶದಲ್ಲಿ ನಡೆದ 11 ಶಿಕ್ಷಕರ ಮತ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆಲುವು ಸಾಧಿಸಿದ್ದು, ಅಚ್ಚರಿಯಂತೆ ಪ್ರಧಾನಿ ಮೋದಿಯ ವಾರಾಣಸಿ ಮತ್ತು ಆಗ್ರಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಎಣಿಕೆ ಮುಂದುವರೆದಿದೆ.
ಮೀರತ್ನ ಎರಡೂ ಕ್ಷೇತ್ರಗಳು, ಬರೇಲಿ-ಮೊರಾದಾಬಾದ್ ಶಿಕ್ಷಕರ ಸ್ಥಾನ ಮತ್ತು ಲಖನೌದ ಶಿಕ್ಷಕರ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದ್ದು, ವಾರಾಣಸಿ ಮತ್ತು ಆಗ್ರಾದಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ. ಉಳಿದ ಕ್ಷೇತ್ರಗಳ ಮತಎಣಿಕೆ ಇಂದು(ಅ. 28) ನಡೆಯಲಿದೆ.
ಮೀರತ್-ಸಹಾರನ್ಪುರ ಪದವೀಧರರ ಕ್ಷೇತ್ರದಲ್ಲಿ, ಬಿಜೆಪಿಯ ಹಾಲಿ ಎಂಎಲ್ಸಿ ದಿನೇಶ್ ಗೋಯಲ್ ಅವರು ಎಸ್ಪಿ ಅಭ್ಯರ್ಥಿ ಪ್ರಮೋದ್ ಸಿಂಗ್ ಭಾಟಿ ಅವರನ್ನು 12,855 ಮತಗಳಿಂದ ಸೋಲಿಸುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅದೇ ರೀತಿ ಮೀರತ್ ಶಿಕ್ಷಕರ ಕ್ಷೇತ್ರವನ್ನು ಸಹ ಹಾಲಿ ಎಂಎಲ್ಸಿ ಶ್ರೀಚಂದ್ ಶರ್ಮಾ, ಬರೇಲಿ-ಮೊರಾದಾಬಾದ್ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿಯ ಹರಿ ಸಿಂಗ್ ಧಿಲ್ಲೋನ್, ಲಖನೌವನ್ನು ಹಾಲಿ ಎಂಎಲ್ಸಿ ಉಮೇಶ್ ದ್ವಿವೇದಿ ಮರು ಆಯ್ಕೆಯಾಗಿದ್ದಾರೆ.
ಇನ್ನೂ ವಾರಣಾಸಿ ಶಿಕ್ಷಕರ ಕ್ಷೇತ್ರವನ್ನು ಎಸ್ಪಿಯ ಹಾಲಿ ಎಂಎಲ್ಸಿ ಲಾಲ್ ಬಿಹಾರಿ ಯಾದವ್ ಉಳಿಸಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ಅವರನ್ನು ಸುಮಾರು 4,900 ಮತಗಳಿಂದ ಸೋಲಿಸಿದ್ದಾರೆ. ಆಗ್ರಾ ಶಿಕ್ಷಕರ ಕ್ಷೇತ್ರದಲ್ಲೂ ಎಸ್ಪಿ ಅಭ್ಯರ್ಥಿ ಆಕಾಶ್ ಅಗರ್ವಾಲ್ ಬಿಜೆಪಿ ಅಭ್ಯರ್ಥಿ ಹರಿ ಕಿಶೋರ್ ತಿವಾರಿ ಅವರನ್ನು ಸೋಲಿಸಿ ವಿಜಯಶಾಲಿಯಾಗಿದ್ದಾರೆ.
ಆಗ್ರಾದಲ್ಲಿ ಆಕಾಶ್ ಅಗರವಾಲ್ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆಗ್ರಾ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆಕಾಶ್ ಅಗರ್ವಾಲ್ ಗೆಲುವು ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಆಡಳಿತವು ಅವರಿಗೆ ತಕ್ಷಣವೇ ಚುನಾವಣಾ ಪ್ರಮಾಣಪತ್ರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜೊತೆಗೆ ಎಕ್ಸ್ನಲ್ಲಿ ಅಗರವಾಲ್ ಹರಿದ ಕುರ್ತಾ ಧರಿಸಿರುವ ವೀಡಿಯೊವನ್ನು ಹಂಚಿಕೊಂಡಿರುವ ಅಖಿಲೇಶ್, ಬಿಜೆಪಿ ಬೆಂಬಲಿಗರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ್ರಾದಿಂದ ಗೆಲ್ಲುತ್ತಿರುವ ಎಸ್ಪಿ ಎಂಎಲ್ಸಿ ಅಭ್ಯರ್ಥಿ ಡಾ. ಆಕಾಶ್ ಅಗ್ರವಾಲ್ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ನಡೆದುಕೊಂಡ ರೀತಿಯನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂಬುದನ್ನು ಬಿಜೆಪಿ ವಿವರಿಸಲಿ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).