ಲಖನೌ: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಏಕಾಏಕಿ ಶೋಕಸಾಗರ ಆವರಿಸಿದೆ. ಪ್ರೇಮಿಯೊಂದಿಗೆ ಮಗಳು ಓಡಿಹೋದ ( Daughter Eloped ) ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಘಾತ ಮತ್ತು ಮಾನಸಿಕ ಆಘಾತಕ್ಕೆ ಒಳಗಾದ ತಾಯಿ ಪ್ರಾಣ ಬಿಟ್ಟಿದ್ದು, ಇದರಿಂದ ಹತಾಶರಾದ ತಂದೆ, ಒಂದೆಡೆ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿ, ಇನ್ನೊಂದೆಡೆ ಬದುಕಿರುವ ಮಗಳಿಗೇ ಪಿಂಡಪ್ರದಾನ ಮಾಡಿ ಆಕೆಯೊಂದಿಗಿನ ಎಲ್ಲಾ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಸಂದೀಪನ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮುರತ್ಗಂಜ್-ಪಲ್ಹಾನಾ ರಸ್ತೆ ಬಳಿ ವಾಸಿಸುವ ರಾಜು ಗುಪ್ತಾ ಅವರ 19 ವರ್ಷದ ಮಗಳು ಇಂಟರ್ಮೀಡಿಯೇಟ್ ವ್ಯಾಸಂಗ ಮಾಡುತ್ತಿದ್ದಳು. ಆಕೆಗೆ ನವೆಂಬರ್ 25 ರಂದು ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿ ಸಂಭ್ರಮದಿಂದ ಸಿದ್ಧತೆ ನಡೆಸುತ್ತಿದ್ದರು.
ಈ ಹಿಂದೆ ಎರಡು ಬಾರಿ ನಿಶ್ಚಯವಾಗಿದ್ದ ಮದುವೆಗಳು ರದ್ದಾಗಿದ್ದವು. ಬಳಿಕ ಫತೇಪುರ್ ಜಿಲ್ಲೆಯ ಯುವಕನೊಂದಿಗೆ ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಅಕ್ಟೋಬರ್ 15 ರಂದು ಕಾಲೇಜಿಗೆ ತೆರಳಿದ್ದ ಮಗಳು ಮನೆಗೆ ಮರಳಲೇ ಇಲ್ಲ. ವಿಚಾರಿಸಿದಾಗ ಆಕೆ ಧನ್ನಿ ಗ್ರಾಮದ ಅಮರ್ದೀಪ್ ರಾಯ್ದಾಸ್ ಎಂಬ ಪ್ರಿಯಕರನೊಂದಿಗೆ ಓಡಿಹೋಗಿರುವುದು ಬೆಳಕಿಗೆ ಬಂದಿದೆ.
ಮಗಳು ಮನೆ ಬಿಟ್ಟು ಪ್ರೇಮಿಯೊಂದಿಗೆ ಓಡಿಹೋದ ಸುದ್ದಿ ಕೇಳಿ ಆಕೆಯ 40 ವರ್ಷದ ತಾಯಿ ಪಾರ್ವತಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ತನಗಾದ ಅಪಮಾನ ಹಾಗೂ ಮಗಳ ನಡವಳಿಕೆಯಿಂದ ಮನನೊಂದ ಕೊನೆಯುಸಿರೆಳೆದರು. ಇತ್ತ ಮಗಳು ಮನೆ ಬಿಟ್ಟು ಹೋದ ದುಃಖ, ಅತ್ತ ಜತೆಯಾಗಿದ್ದ ಪತ್ನಿಯ ಅಗಲಿಕೆಯಿಂದ ರಾಜು ಗುಪ್ತಾ ಸಂಪೂರ್ಣವಾಗಿ ಕಂಗಾಲಾದರು. ಈ ನಡುವೆ, ತಾಯಿಯ ಅಂತ್ಯಸಂಸ್ಕಾರಕ್ಕೆ ಬರುವಂತೆ ಪೊಲೀಸರು ಮಗಳಿಗೆ ತಿಳಿಸಿದರೂ ಆಕೆ ಬರಲು ನಿರಾಕರಿಸಿದಳು. ಅಲ್ಲದೆ, ತಾನು ಸ್ವಇಚ್ಛೆಯಿಂದಲೇ ಪ್ರೇಮಿಯೊಂದಿಗೆ ಬಂದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಈ ಎಲ್ಲಾ ಸರಣಿ ಆಘಾತಗಳಿಂದ ತೀವ್ರ ಆಕ್ರೋಶ ಹಾಗೂ ದುಃಖಕ್ಕೊಳಗಾದ ತಂದೆ ರಾಜು ಗುಪ್ತಾ, ಪತ್ನಿಯ 13ನೇ ದಿನದ ಕಾರ್ಯದ ಜತೆಯಲ್ಲೇ ಬದುಕಿರುವ ಮಗಳಿಗೂ ಪಿಂಡಪ್ರದಾನ ಮಾಡಿ ಉತ್ತರಕ್ರಿಯೆ ನೆರವೇರಿಸಿದ್ದಾರೆ. ಮಗಳ ನಡವಳಿಕೆಯೇ ತನ್ನ ಹೆಂಡತಿಯ ಸಾವಿಗೆ ನೇರ ಕಾರಣ ಎಂದು ಆರೋಪಿಸಿರುವ ರಾಜು ಗುಪ್ತಾ, ಇನ್ಮುಂದೆ ಆಕೆ ತನಗೆ ಮಗಳಲ್ಲ ಮತ್ತು ತನ್ನ ಆಸ್ತಿಯಲ್ಲಿ ಒಂದು ಬಿಡಿಗಾಸನ್ನೂ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಕುಟುಂಬದ ಗೌರವ ಹಾಗೂ ಪ್ರೀತಿಯ ನಡುವಿನ ಈ ಸಂಘರ್ಷ ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ, (ಏಜೆನ್ಸೀಸ್).