ಮಧ್ಯರಾತ್ರಿ ಮನೆಗೆ ನುಗ್ಗಿದ ನಾಗರಹಾವು: ಬೆಕ್ಕಿನ ಆ ವಿಚಿತ್ರ ವರ್ತನೆಯಿಂದ ಇಡೀ ಕುಟುಂಬ ಅಪಾಯದಿಂದ ಬಚಾವ್​! Cat 
ದೇಶ

ಮಧ್ಯರಾತ್ರಿ ಮನೆಗೆ ನುಗ್ಗಿದ ನಾಗರಹಾವು: ಬೆಕ್ಕಿನ ಆ ವಿಚಿತ್ರ ವರ್ತನೆಯಿಂದ ಇಡೀ ಕುಟುಂಬ ಅಪಾಯದಿಂದ ಬಚಾವ್​! Cat

ಪ್ರಮುಖ ಮುಖ್ಯಾಂಶಗಳು

  • ಕಣ್ಣೂರಿನಲ್ಲಿ ಬೆಕ್ಕಿನ ಚಾಕಚಕ್ಯತೆಯಿಂದ ಬಚಾವಾದ ಕುಟುಂಬ
  • ಅಡುಗೆ ಮನೆಯ ಪಾತ್ರೆಯೊಳಗೆ ಅವಿತುಕೊಂಡಿದ್ದ ವಿಷಪೂರಿತ ನಾಗರಹಾವು
  • ನಡುರಾತ್ರಿ ಬೆಕ್ಕಿನ ವಿಚಿತ್ರ ಕೂಗಿನಿಂದ ನಿದ್ರೆಯಿಂದೆದ್ದ ಮನೆಮಂದಿ
  • ಸಮಯೋಚಿತವಾಗಿ ಕಾರ್ಯಪ್ರವೃತ್ತರಾಗಿ ಹಾವನ್ನು ಹಿಡಿದ ಉರಗ ರಕ್ಷಕ
ತಿರುವನಂತಪುರಂ: ಬೆಕ್ಕಿನ ( Cat ) ವಿಚಿತ್ರ ಕೂಗಿನಿಂದ ನಡುರಾತ್ರಿ ನಿದ್ದೆಯಿಂದೆದ್ದ ಕುಟುಂಬವೊಂದು ಭಾರಿ ಅಪಾಯದಿಂದ ಬಚಾವ್​ ಅದ ರೋಚಕ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಿಲ್ಲಂಕೇರಿಯ ಮುನೀರ್ ಎಂಬವರ ಮನೆಯಲ್ಲಿ ಈ ಪವಾಡಸದೃಶ ಪ್ರಸಂಗ ಜರುಗಿದೆ.
ಆಗಿದ್ದೇನೆಂದರೆ? ಮಧ್ಯರಾತ್ರಿ ವೇಳೆ ಅಡುಗೆ ಮನೆಯಿಂದ ಬರುತ್ತಿದ್ದ ಬೆಕ್ಕಿನ ವಿಚಿತ್ರ ಹಾಗೂ ನಿರಂತರ ಅಳು ಧ್ವನಿಯನ್ನು ಕೇಳಿದ ಮುನೀರ್ ಹಾಗೂ ಅವರ ಕುಟುಂಬದವರು ತಕ್ಷಣ ನಿದ್ರೆಯಿಂದ ಎಚ್ಚೆತ್ತುಕೊಂಡರು. ಬೆಕ್ಕು ಯಾವುದಾದರೂ ಇಲಿಯನ್ನು ಹಿಡಿದಿರಬಹುದು ಎಂದು ಆರಂಭದಲ್ಲಿ ಮುನೀರ್​ ಕುಟುಂಬ ಭಾವಿಸಿತು. ಆದರೆ, ಬೆಕ್ಕು ಎಡಬಿಡದೇ ನಿರಂತವಾಗಿ ಕೂಗಿದ್ದರಿಂದ ಒಂದು ಅನುಮಾನ ಮೂಡಿತು.
ಕೂಡಲೇ ಎಚ್ಚೆತ್ತುಕೊಂಡು ಅಡುಗೆ ಮನೆಯನ್ನು ಪರಿಶೀಲಿಸಿದ ಮುನೀರ್ ಅವರಿಗೆ ಅಲ್ಲಿ ಅಡಗಿದ್ದ ವಿಷಪೂರಿತ ನಾಗರಹಾವು ಕಣ್ಣಿಗೆ ಬಿತ್ತು. ಅಡುಗೆ ಮನೆಯಲ್ಲಿ ಬಳಕೆಯಾಗುವ ಪಾತ್ರೆಯೊಂದರ ಒಳಗೆಯೇ ಆಪಾಯಕಾರಿ ನಾಗರಹಾವು ಅವಿತುಕೊಂಡಿರುವುದು ಕಂಡುಬಂದು ಇಡೀ ಕುಟುಂಬವೇ ಒಂದು ಕ್ಷಣ ಬೆಚ್ಚಿಬಿದ್ದಿತು.
ತಕ್ಷಣವೇ ಎಚ್ಚೆತ್ತುಕೊಂಡ ಮುನೀರ್ ಅವರು ಉರಗ ರಕ್ಷಕರನ್ನು ಸಂಪರ್ಕಿಸಿ ಸಹಾಯ ಕೋರಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಮಾರ್ಕ್ ಕಾರ್ಯಕರ್ತ ಫೈಸಲ್ ವಿಳಕ್ಕೋಡೆ ಅವರು ಯಾವುದೇ ಅಪಾಯವಾಗದಂತೆ ಚುರುಕಾಗಿ ಆ ವಿಷಪೂರಿತ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಸ್ಥಳದಿಂದ ಒಯ್ದರು.
ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡಿ ಇಡೀ ಮನೆಮಂದಿಯ ಜೀವ ಉಳಿಸಿದ ಆ ಮೂಕಪ್ರಾಣಿಯ ಜಾಗರೂಕತೆಗೆ ಈಗ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಯೋಚಿತ ಬುದ್ಧಿವಂತಿಕೆ ಮತ್ತು ಬೆಕ್ಕಿನ ಆಪತ್ಬಾಂಧವ ಕಾವಲುಗಾರಿಕೆಯಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ, (ಏಜೆನ್ಸೀಸ್​).