- ತೆಲಗಾಂಣದಲ್ಲಿ ಮುಂದೂವರಿದ ಬೀದಿ ನಾಯಿಗಳ ಸಾಮೂಹಿಕ ಕೊಲೆ
- ವಿಷಪ್ರಾಶನ ಮಾಡಿ 100 ನಾಯಿಗಳನ್ನು ಕೊಂದ ಆರೋಪ
- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲು ನಾಯಿಗಳ ಹತ್ಯೆ
ತೆಲಂಗಾಣ: ಹೈದರಾಬಾದ್ನ ಯಾಚಾರಂ ಗ್ರಾಮದಲ್ಲಿ ಬೀದಿ ನಾಯಿ(Stray Dogs)ಗಳ ಸಾಮೂಹಿಕ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸುಮಾರು 100 ನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.
ನಾಯಿಗಳಿಗೆ ವಿಷನೀಡಿರುವ ಆರೋಪದಲ್ಲಿ ಯಾಚಾರಂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜನವರಿ 19 ರಂದು ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾದ ಪ್ರಾಣಿ ಕಲ್ಯಾಣ ಕಾರ್ಯಕರ್ತೆಯೊಬ್ಬರು ಬೀದಿ ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಕ್ರಮ ಕೈಗೊಂಡ ಯಾಚಾರಂ ಪೊಲೀಸರು ಬಿಎನ್‌ಎಸ್ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ಸುಮಾರು 100 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಉಲ್ಲೇಖಿಸಲಾಗಿದ್ದರೂ, ಪ್ರಾಥಮಿಕ ತನಿಖೆಯಲ್ಲಿ ಕನಿಷ್ಠ 50 ಸಾವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ. ಮೃತದೇಹಗಳ ಹುಡುಕಾಟ ಮುಂದುವರಿದಂತೆ ಸಂಖ್ಯೆಗಳು ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದಾದ್ಯಂತ ಬೀದಿನಾಯಿಗಳ ಸಾಮೂಹಿಕ ಹತ್ಯೆ
ಇತ್ತೀಚಿನ ದಿನಗಳಲ್ಲಿ ತೆಲಂಗಾಣದಾದ್ಯಂತ ಬೀದಿನಾಯಿಗಳ ಸಾಮೂಹಿಕ ಹತ್ಯೆ ಹೆಚ್ಚಾಗುತ್ತಿದ್ದು, ಹನಮಕೊಂಡ ಪೊಲೀಸರು ಶಯಂಪೇಟ್ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ಸುಮಾರು 300 ಬೀದಿ ನಾಯಿಗಳನ್ನು ಕೊಂದ ಆರೋಪದ ಮೇಲೆ ಇಬ್ಬರು ಮಹಿಳಾ ಗ್ರಾಮ ಪಂಚಾಯತ್ ಸಗಸ್ಯರು ಅವರ ಗಂಡಂದಿರು ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಾಮರೆಡ್ಡಿ ಜಿಲ್ಲೆಯಲ್ಲಿ ಸುಮಾರು 200 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಐದು ಗ್ರಾಮದ ಸರಪಂಚರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚುನಾವಣಾ ಭರವಸೆ; ನಾಯಿಗಳ ಕೊಲೆ
ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕೆಲವು ಚುನಾಯಿತ ಪ್ರತಿನಿಧಿಗಳು ಈ ಹತ್ಯೆಗಳಿಗೆ ಆದೇಶಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಬೀದಿ ನಾಯಿಗಳ ಕಾಟವನ್ನು ನಿಯಂತ್ರಿಸುವ ನೆಪದಲ್ಲಿ ಸಾಮೂಹಿಕ ಹತ್ಯೆಯನ್ನು ನಡೆಸಲಾಗಿದೆ ಎಂದ ಅಧಿಕಾರಿಗಳು ಯಾಚಾರಂ ಘಟನೆಯ ತನಿಖೆಯನ್ನು ಮುಂದುವರೆಸಿದ್ದಾರೆ ಮತ್ತು ನಾಯಿಗಳ ಶವಗಳು ಸೇರಿದಂತೆ ಪುರಾವೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).