ಮಧ್ಯರಾತ್ರಿ ಬೆತ್ತೆಲೆಯಾಗಿ ಬಂದು ಬಾಗಿಲು ಬಡಿಯುವ ಅಪರಿಚಿತ: ಸಿಸಿಟಿವಿ ದೃಶ್ಯ ನೋಡಿ ಹೆದರಿದ ಸ್ಥಳೀಯರು! Unknown Man
- ಕೇರಳದ ತಾಮರಶ್ಶೇರಿಯಲ್ಲಿ ತಡರಾತ್ರಿ ಬೆತ್ತಲೆಯಾಗಿ ಬಂದು ಮನೆ ಬಾಗಿಲು ತಟ್ಟುತ್ತಿರುವ ಅಪರಿಚಿತ ವ್ಯಕ್ತಿ
- ಕೋಳಿಕ್ಕೋಡ್‌ನಲ್ಲಿ ರಾತ್ರಿ ವೇಳೆ ಮುಖ ಮುಚ್ಚಿಕೊಂಡು ಡೋರ್‌ಬೆಲ್ ಬಾರಿಸಿ ಎಸ್ಕೇಪ್ ಆಗುತ್ತಿರುವ ಬೆತ್ತಲೆ ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ
- ಅನುಮಾನಾಸ್ಪದ ಡೋರ್‌ಬೆಲ್ ಸದ್ದು ಕೇಳಿದರೆ ಬಾಗಿಲು ತೆರೆಯದಂತೆ ತಾಮರಶ್ಶೇರಿ ಪೊಲೀಸರ ಮುನ್ನೆಚ್ಚರಿಕೆ
- ಸಿಸಿಟಿವಿಯಲ್ಲಿ ಸೆರೆಯಾಯಿತು ಬೆತ್ತಲೆ ವ್ಯಕ್ತಿಯ ವಿಚಿತ್ರ ಕೃತ್ಯ ಆರೋಪಿಯ ಬಂಧನಕ್ಕೆ ಸ್ಥಳೀಯರ ಆಗ್ರಹ
Unknown Man : ಕೇರಳದ ಕೋಳಿಕ್ಕೋಡ್‌ನ ತಾಮರಶ್ಶೇರಿಯಲ್ಲಿ ತಡರಾತ್ರಿಯಲ್ಲಿ ನಡೆದ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ಸ್ಥಳೀಯ ಜನರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.
ಕತ್ತಲಲ್ಲಿ ಸಂಪೂರ್ಣ ಬೆತ್ತಲೆಯಾಗಿ ಬರುವ ಅಪರಿಚಿತ ವ್ಯಕ್ತಿಯೊಬ್ಬ ಮನೆಗಳ ಬಾಗಿಲು ತಟ್ಟಿ ಅಥವಾ ಡೋರ್‌ಬೆಲ್ ಬಾರಿಸಿ ತಕ್ಷಣ ಅಲ್ಲಿಂದ ಕಾಲ್ಕಿಳುತ್ತಿದ್ದಾರೆ. ಈ ಇಡೀ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಸ್ಥಳೀಯ ಜನರು ರಾತ್ರಿ ವೇಳೆಯಲ್ಲಿ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ. ಅಲ್ಲದೆ, ಈ ಘಟನೆಗೆ ಕಾರಣನಾದ ವ್ಯಕ್ತಿಯನ್ನು ಶೀಘ್ರವೇ ಬಂಧಿಸುವಂತೆ ಪೊಲೀಸರಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಳಿಕ್ಕೋಡ್‌ನ ತಾಮರಶ್ಶೇರಿ ಪೊಲೀಸ್ ಠಾಣೆಯ ತೀರಾ ಸಮೀಪದಲ್ಲೇ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಮುಖವನ್ನು ಪೂರ್ಣವಾಗಿ ಮುಚ್ಚಿಕೊಂಡು ಸಂಪೂರ್ಣ ಬೆತ್ತಲೆಯಾಗಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಮನೆಗಳ ಆವರಣಕ್ಕೆ ನುಗ್ಗಿ ಡೋರ್‌ಬೆಲ್ ಬಾರಿಸಿ ಸಾರ್ವಜನಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ್ದಾನೆ.
ತಡರಾತ್ರಿ ಡೋರ್‌ಬೆಲ್ ಸದ್ದು ಕೇಳಿ ಬೆದರಿ ಎಚ್ಚರಗೊಂಡ ಮನೆಯವರು ತಕ್ಷಣವೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆ ವ್ಯಕ್ತಿಯು ಮನೆಯ ಪಕ್ಕಕ್ಕೆ ಸರಿದು ಹೋಗುತ್ತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ನೆರೆಹೊರೆಯವರಿಗೆ ಹಾಗೂ ಸ್ಥಳೀಯರಿಗೆ ವಿಷಯ ತಿಳಿಸಿ ಕರೆದಿದ್ದಾರೆ. ಆದರೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸುವಷ್ಟರಲ್ಲೇ ಆ ಅಪರಿಚಿತ ವ್ಯಕ್ತಿ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಆತಂಕಕಾರಿ ಘಟನೆಯ ಬೆನ್ನಲ್ಲೇ ತಾಮರಶ್ಶೇರಿ ಪೊಲೀಸರು ಪ್ರದೇಶದಲ್ಲಿ ಗಸ್ತು ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರಾತ್ರಿ ವೇಳೆ ಡೋರ್‌ಬೆಲ್ ಸದ್ದು ಅಥವಾ ಯಾವುದೇ ಅನುಮಾನಾಸ್ಪದ ಶಬ್ದಗಳು ಕೇಳಿಬಂದಲ್ಲಿ ತಕ್ಷಣ ಬಾಗಿಲು ತೆರೆಯಬಾರದು ಹಾಗೂ ಹೊರಗೆ ಯಾರಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಂಡ ನಂತರವಷ್ಟೇ ಬಾಗಿಲು ತೆರೆಯುವಂತೆ ಸಾರ್ವಜನಿಕರಿಗೆ ಪೊಲೀಸರು ಮುನ್ನೆಚ್ಚರಿಕೆ ಸೂಚನೆ ನೀಡಿದ್ದಾರೆ, (ಏಜೆನ್ಸೀಸ್).