ಕೇಂದ್ರ ಬಜೆಟ್ 2026; ಬರೀ ಹೈಪ್, ಕೆಲಸ ಶೂನ್ಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ 
ದೇಶ

ಕೇಂದ್ರ ಬಜೆಟ್ 2026; ಬರೀ ಹೈಪ್, ಕೆಲಸ ಶೂನ್ಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ | Congress

ನವದೆಹಲಿ: ಇಂದು ಮಂಡನೆಯಾದ 2026-27ನೇ ಸಾಲಿನ ಕೇಂದ್ರ ಬಜೆಟ್ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಬಜೆಟ್ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್(Congress) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಸಂಪೂರ್ಣ ಕಳೆಗುಂದಿದ ಬಜೆಟ್ ಎಂದು ಕಿಡಿಕಾರಿದೆ.

ಹೈಪ್ ಹೆಚ್ಚು, ಹೂರಣ ಕಡಿಮೆ..!

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಕೆಲವು ವಾರಗಳಿಂದ ಈ ಬಜೆಟ್ ಬಗ್ಗೆ ಸೃಷ್ಟಿಸಲಾಗಿದ್ದ ನಿರೀಕ್ಷೆಗಳು ಮತ್ತು ಹೈಪ್ ಬೆಟ್ಟದಷ್ಟಿತ್ತು. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 90 ನಿಮಿಷಗಳ ಭಾಷಣದ ನಂತರ ಹೊರಬಂದ ಫಲಿತಾಂಶ ಮಾತ್ರ ಶೂನ್ಯ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಗಬೇಕಾದ ಯಾವುದೇ ಆಶಾದಾಯಕ ಅಂಶಗಳಿಲ್ಲ. ಇದು ಕೇವಲ ಅಂಕಿ-ಅಂಶಗಳ ಆಟವಾಗಿದೆಯೇ ಹೊರತು, ದೇಶದ ಅಭಿವೃದ್ಧಿಗೆ ಪೂರಕವಾದ ಯಾವುದೇ ದೂರದೃಷ್ಟಿ ಇದರಲ್ಲಿ ಕಾಣುತ್ತಿಲ್ಲ ಎಂದು ರಮೇಶ್ ಕಿಡಿಕಾರಿದ್ದಾರೆ.

ಅಪಾರದರ್ಶಕ ಬಜೆಟ್ ಎಂಬ ಆರೋಪ

ಈ ಬಾರಿಯ ಬಜೆಟ್ ಭಾಷಣವನ್ನು ಅಪಾರದರ್ಶಕ" ಎಂದು ಕರೆದಿರುವ ಕಾಂಗ್ರೆಸ್, ಪ್ರಮುಖ ಯೋಜನೆಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದನ್ನು ಬೆಟ್ಟು ಮಾಡಿದೆ. ದೇಶದ ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಜೆಟ್ ಹಂಚಿಕೆಯ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡಿಲ್ಲ. ಇದು ಸಾರ್ವಜನಿಕರನ್ನು ಹಾದಿ ತಪ್ಪಿಸುವ ಪ್ರಯತ್ನ ಎಂದು ಜೈರಾಮ್ ರಮೇಶ್ ಟೀಕಾಪ್ರಹಾರ ನಡೆಸಿದ್ದಾರೆ.
ಬಜೆಟ್ ದಾಖಲೆಗಳನ್ನು ನಾವು ಸವಿಸ್ತಾರವಾಗಿ ಅಧ್ಯಯನ ಮಾಡಬೇಕಿದೆ. ಆದರೆ ಪ್ರಾಥಮಿಕವಾಗಿ ನೋಡಿದಾಗ, ಈ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ ಜೈರಾಮ್ ರಮೇಶ್ ಕೇಂದ್ರದ ವಿರುದ್ದ ತೀವ್ರ ಅಸಾಮಾಧಾನ ಹೊರಹಾಕಿದ್ದಾರೆ.

ಮುಖ್ಯ ಅಂಶಗಳ ಮೇಲಿನ ಟೀಕೆ

ಉದ್ಯೋಗ ಸೃಷ್ಟಿ: ಯುವಜನತೆಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ಸ್ಪಷ್ಟವಾದ ರೋಡ್‌ಮ್ಯಾಪ್ ಇಲ್ಲ.
ಬೆಲೆ ಏರಿಕೆ: ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಬೆಲೆ ಏರಿಕೆಯನ್ನು ನಿಯಂತ್ರಿಸಲು ಯಾವುದೇ ಕ್ರಮಗಳಿಲ್ಲ.
ರೈತರಿಗೆ ನಿರ್ಲಕ್ಷ್ಯ: ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಒಟ್ಟಾರೆಯಾಗಿ, ಈ ಬಜೆಟ್ ಕೇವಲ ಆಡಳಿತ ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆಯೇ ಹೊರತು, ದೇಶದ ಅರ್ಥವ್ಯವಸ್ಥೆಯನ್ನು ಸುಧಾರಿಸುವ ಶಕ್ತಿ ಇದಕ್ಕಿಲ್ಲ ಎಂಬುದು ವಿರೋಧ ಪಕ್ಷಗಳ ಪ್ರಬಲ ವಾದವಾಗಿದೆ,(ಏಜೆನ್ಸೀಸ್).