ಚೆನ್ನೈ: ಸಿಎಂ ವಿಜಯ್ ಮತ್ತು ನಟಿ ತ್ರಿಷಾ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ಇಂದೇ ವಿಚಾರಣೆ ನಡೆಸಿ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್(Madras High Court) ಪೊಲೀಸರಿಗೆ ನಿರ್ದೇಶನ ನೀಡಿದೆ.
ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ವಿವಾದಾತ್ಮಕ ಹೇಳಿಕೆಗಾಗಿ ಇಂದು(ಆ. 04) ಮುಂಜಾನೆ ತಂಜಾವೂರು ಪೊಲೀಸರು ಬಂಧಿಸಿದ್ದರು. ಬಂಧನ ವಿರೋಧಿಸಿ ಡಿಎಂಕೆ ಮದ್ರಾಸ್ ಹೈಕೋರ್ಟ್ ಅರ್ಜಿ ಸಲ್ಲಿಸಿತ್ತು.
ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್, ಪೊಲೀಸರ ವಿಚಾರಣೆಗೆ ಸಹಕರಿಸುವಂತೆಯೂ ಹೇಳಿ, ಉದಯನಿಧಿ ಅವರನ್ನು ಇಂದೇ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.
ವಿಚಾರಣೆಯ ಸಮಯದಲ್ಲಿ, ಹೇಳಿಕೆಗೆ ಸಂಬಂಧಿಸಿದಂತೆ ತಂಜಾವೂರು ಪೊಲೀಸರು ಉದಯನಿಧಿ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಅವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕೋರುವ ಉದ್ದೇಶವಿಲ್ಲ. ಬದಲಿಗೆ ಅವರನ್ನು ಪ್ರಶ್ನಿಸುವ ಉದ್ದೇಶ ಹೊಂದಿದ್ದಾರೆ ಎಂದು ನ್ಯಾಯಾಲಕ್ಕೆ ತಿಳಿಸಿದರು.
ಸೋಮವಾರ ತಂಜಾವೂರಿನಲ್ಲಿ ನಡೆದ ಕಾವೇರಿ ನದಿ ನೀರಿನ ಸಂಬಂಧ ಪ್ರತಿಭಟನೆಯ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್, ಸಿಎಂ ವಿಜಯ್ ಅವರನ್ನು ಗುರಿಯಾಗಿಸುವ ಭರದಲ್ಲಿ ನಟಿ ತ್ರಿಷಾ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಉದಯನಿಧಿ ವಿರುದ್ಧ ಟಿವಿಕೆ ಮಹಿಳಾ ಕಾರ್ಯಕರ್ತರು ದೂರು ದಾಖಲಿಸಿದ್ದು, ಒಟ್ಟು ಸುಮಾರು 7 ಎಫ್ಐಆರ್ ದಾಖಲಾಗಿದೆ ಎನ್ನಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಉದಯನಿಧಿ ಅವರನ್ನು ನೀಲಂಕರೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಅವರ ನಿವಾಸದಿಂದ ತಂಜಾವೂರು ಮತ್ತು ನೀಲಂಕರೈ ಪೊಲೀಸರ ಜಂಟಿ ತಂಡವು ವಿಚಾರಣೆಗಾಗಿ ವಶಕ್ಕೆ ಪಡೆದಿದೆ (ಏಜೆನ್ಸೀಸ್).