Bathroom Leader Jibe | ಸಂಘಿ ಸಚಿವ ಎಂದ ಉದಯನಿಧಿಗೆ ನಿರ್ಮಲ್ ಕುಮಾರ್ ಟಾಂಗ್​ 
ದೇಶ

ವಿಧಾನಸಭೆಯಲ್ಲೇ ಜಟಾಪಟಿ: ಸಂಘಿ ಸಚಿವ ಎಂದ ಉದಯನಿಧಿಗೆ ನಿರ್ಮಲ್ ಕುಮಾರ್ ನೆನಪಿಸಿದ್ದು ಆ ಬಾತ್ರೂಮ್ ಸೀನ್! | Bathroom Leader Jibe

ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಉದಯನಿಧಿ ಸ್ಟಾಲಿನ್ ಅವರು ನಿರ್ಮಲ್ ಕುಮಾರ್​ರನ್ನು ಸಂಘಿ ಸಚಿವ ಎಂದು ಕರೆದಾಗ, ಅದಕ್ಕೆ ಪ್ರತಿಯಾಗಿ ನಿರ್ಮಲ್ ಕುಮಾರ್, ಉದಯನಿಧಿಯನ್ನು ಬಾತ್ರೂಮ್ ಲೀಡರ್ (Bathroom Leader Jibe) ಎಂದು ವ್ಯಂಗ್ಯವಾಡಿದರು.

ನಟಿ ತ್ರಿಷಾ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಪೊಲೀಸರು ಉದಯನಿಧಿ ಸ್ಟಾಲಿನ್ ಮನೆಗೆ ಬಂಧನಕ್ಕಾಗಿ ಬಂದಾಗ ನಡೆದ ಘಟನೆಯನ್ನು ಪ್ರಸ್ತಾಪಿಸಿ, ಈ ರೀತಿಯಾಗಿ ವ್ಯಂಗ್ಯ ಮಾಡಲಾಯಿತು. ತದನಂತರ, ಉದಯನಿಧಿ ಸ್ಟಾಲಿನ್ ಅವರು ಸಿಟಿಆರ್ ನಿರ್ಮಲ್ ಕುಮಾರ್ ಅವರ ಕುರಿತು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಿದರು.

ಏನಿದು ಬಾತ್ರೂಮ್ ಲೀಡರ್ ವಿವಾದ..?

ನಟಿ ತ್ರಿಷಾ ವಿರುದ್ಧ ನೀಡಲಾದ ವಿವಾದಾತ್ಮಕ ಹೇಳಿಕೆಗಾಗಿ ಉದಯನಿಧಿ ಸ್ಟಾಲಿನ್​ರನ್ನು ಬಂಧಿಸಲು ಪೊಲೀಸರು ಅವರ ಮನೆಗೆ ತೆರಳಿದ್ದಾಗ, ಉದಯನಿಧಿ ಪತ್ನಿ ಕೃತಿಗಾ ಅವರು ಅವರು ಶೌಚಾಲಯದಲ್ಲಿದ್ದಾರೆ, ಸ್ವಲ್ಪ ಸಮಯ ನೀಡಿ ಎಂದು ಕೇಳಿಕೊಂಡ ವೀಡಿಯೊ ಹರಿದಾಡಿತ್ತು. ಕೃತಿಗಾ ಅವರ ವಿನಂತಿಯ ಹೊರತಾಗಿಯೂ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಅವರನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಲ್ ಕುಮಾರ್ ಅವರು ಬಾತ್ರೂಮ್ ಲೀಡರ್ ಎಂಬ ಟೀಕೆ ಮಾಡಿದ್ದರು.

ತಮಿಳುನಾಡು ಶಾಸಕರಿಗೆ ಹೊಸ ವಾಹನ ಹಾಗೂ ಇತರ ಸೌಲಭ್ಯಗಳನ್ನು ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಲು, ಟಿವಿಕೆ ಶಾಸಕಿ ಕೆ. ಸಿಂಧು ಅವರು ವಿಧಾನಸಭೆಯಲ್ಲಿ ಎಂಜಿಆರ್ ಅವರ ಕೊಡುತ್ ತದೆಲ್ಲಾಮ್ ಕೊಡುತ್ ತಾನ್ ಎಂಬ ಜನಪ್ರಿಯ ಗೀತೆಯನ್ನು ಹಾಡಿದ್ದರು. ಇದನ್ನು ಉಲ್ಲೇಖಿಸಿ ಟೀಕಿಸಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಶಾಸಕರು ವಿಧಾನಸಭೆಯ ಕಲಾಪಗಳನ್ನು ಸೂಪರ್ ಸಿಂಗರ್ ಇವೆಂಟ್​ನಂತೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಂಚ್ ಡೈಲಾಗ್‌ ಬಿಟ್ಟು ಫೈಲ್‌ ತೆಗೀರಿ!...

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸಿಎಂ ಜೋಸೆಫ್ ವಿಜಯ್ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಫೈಲ್‌ಗಳು ತಮ್ಮ ಮೇಜಿನ ಮೇಲಿವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಸಿನಿಮಾದ ಪಂಚ್ ಡೈಲಾಗ್‌ಗಳನ್ನು ಹೊಡೆಯುವುದನ್ನು ಬಿಟ್ಟು, ಸೂಕ್ತ ಸಮಯಕ್ಕಾಗಿ ಕಾಯದೆ ತಕ್ಷಣವೇ ಆ ಫೈಲ್‌ಗಳನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಅಲ್ಲದೆ, ಡಿಎಂಕೆ ಪಕ್ಷವು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ, ರಸ್ತೆ ಕಾಮಗಾರಿಗಳ ಅಕ್ರಮ ಕುರಿತು ನಡೆದ ಚರ್ಚೆಯ ವೇಳೆ ಸಿಎಂ ವಿಜಯ್ ಅವರು, ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಫೈಲ್‌ಗಳನ್ನು ಮೂರು ಇಲಾಖೆಗಳು ಪರಿಶೀಲಿಸಿದ್ದು, ಅವು ತಮ್ಮ ಮೇಜಿನ ಮೇಲಿವೆ ಎಂದು ಹೇಳಿದ್ದರು. ಸಾಕ್ಷ್ಯಗಳೊಂದಿಗೆ ಎಲ್ಲವೂ ಸಿದ್ಧವಾಗಿದೆ, ಅದನ್ನು ತೆರೆಯುವಂತೆ ನಮ್ಮನ್ನು ಪ್ರಚೋದಿಸಬೇಡಿ ಎಂದು ಹೇಳಿದ್ದ ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉದಯನಿಧಿ, ನಾವು ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಪ್ರಸ್ತಾಪಿಸುತ್ತಿದ್ದೇವೆ, ನಿಮ್ಮ ಬಳಿ ನಿಜವಾದ ಸಾಕ್ಷ್ಯಗಳಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಿ, ಅದಕ್ಕೆ ನಾವೇನೂ ಅಡ್ಡಿಪಡಿಸುವುದಿಲ್ಲ ಎಂದು ಮತ್ತೊಮ್ಮೆ ಸವಾಲು ಹಾಕಿದರು.
ಇದಲ್ಲದೆ, ವಿಧಾನಸಭೆಯ ಕಲಾಪಗಳ ನೇರ ಪ್ರಸಾರಕ್ಕೆ ಸರ್ಕಾರ ಏಕೆ ಅನುಮತಿ ನೀಡಿಲ್ಲ ಎಂದು ಸಚಿವ ಆಧವ್ ಅರ್ಜುನರನ್ನು ಉದಯನಿಧಿ ಪ್ರಶ್ನಿಸಿದರು. ಜತೆಗೆ, ಸಭಾಧ್ಯಕ್ಷರು ಕಲಾಪದ ಅಧಿಕೃತ ದಾಖಲೆಯಿಂದ ತೆಗೆದುಹಾಕಿದ ಪದಗಳು ಹಾಗೂ ಆಯ್ದ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ತಡೆಯಲು ಇರುವ ಸೂಕ್ತ ಪರಿಹಾರದ ಬಗ್ಗೆ ಕೇಳಿದರು.(ಏಜೆನ್ಸೀಸ್).