ಉದ್ಧವ್ ಠಾಕ್ರೆ ವಿರುದ್ಧ ದಿಶಾ ಸಾಲಿಯನ್ ಪರ ವಕೀಲ ಆರೋಪ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಕಾವು ಪಡೆದುಕೊಂಡಿದೆ.
ದಿಶಾ ಸಾಲಿಯನ್ ತಂದೆ ಪರ ವಕೀಲ ನೀಲೇಶ್ ಓಜಾ ನೀಡಿರುವ ಸ್ಫೋಟಕ ಹೇಳಿಕೆಯೊಂದು ಈಗ ದೊಡ್ಡ ಸಂಚಲನ ಸೃಷ್ಟಿಸಿದ್ದು, ಈ ಪ್ರಕರಣದಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರೇ ಪ್ರಮುಖ ಆರೋಪಿ ಎಂದು ವಕೀಲರು ನೇರ ಆರೋಪ ಮಾಡಿದ್ದಾರೆ.
ವಕೀಲರ ಆರೋಪಗಳೇನು?
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ವಕೀಲ ನೀಲೇಶ್ ಓಜಾ ಈ ಪ್ರಕರಣದಲ್ಲಿ ತಮ್ಮ ಮಗ ಆದಿತ್ಯ ಠಾಕ್ರೆ ತಪ್ಪುಗಳನ್ನು ಮುಚ್ಚಿಹಾಕಲು ಉದ್ಧವ್ ಠಾಕ್ರೆ ನೇರವಾಗಿ ನಿಂತಿದ್ದಾರೆ ಎಂದು ಓಜಾ ಆರೋಪಿಸಿದ್ದಾರೆ. ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪ ಹೊತ್ತು, ಹೈಕೋರ್ಟ್ ಆದೇಶದ ಮೇರೆಗೆ ವಜಾಗೊಂಡಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ತುರ್ತಾಗಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ದಿಶಾ ಸಾಲಿಯನ್ ಹಾಗೂ ಸುಶಾಂತ್ ಸಿಂಗ್ ಹತ್ಯೆಗೆ ಕೇವಲ ಎರಡು ದಿನಗಳ ಮುಂಚೆಯೇ ಈ ನಾಟಕೀಯ ಬೆಳವಣಿಗೆ ನಡೆದಿತ್ತು ಎಂದು ಅವರು ದೂರಿದ್ದಾರೆ.
ಒತ್ತಡ ಹೇರಿದ್ದೇಕೆ?: ಸಚಿನ್ ವಾಜೆಯನ್ನು ಮರುನೇಮಕ ಮಾಡಲು ಉದ್ಧವ್ ಮತ್ತು ಆದಿತ್ಯ ಠಾಕ್ರೆ ತೀವ್ರ ಒತ್ತಡ ಹೇರಿದ್ದರು ಎಂಬುದಕ್ಕೆ ಆಗಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರ ಹೇಳಿಕೆಗಳೇ ಸಾಕ್ಷಿ ಎಂದು ವಕೀಲರು ವಾದಿಸಿದ್ದಾರೆ.
ಉದ್ಧವ್ ಠಾಕ್ರೆ ಆಕ್ರೋಶ ಮತ್ತು ಎಚ್ಚರಿಕೆ
ಮತ್ತೊಂದೆಡೆ, ತಮ್ಮ ಕುಟುಂಬದ ಮೇಲೆ ನಡೆಯುತ್ತಿರುವ ಈ ಆರೋಪಗಳನ್ನು ಉದ್ಧವ್ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ. ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಆರೋಪ ಎಂದು ಅವರು ಕಿಡಿಕಾರಿದ್ದಾರೆ.
ವ್ಯಂಗ್ಯದ ದಾಳಿ: ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಿರಂತರವಾಗಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೆ ಎಷ್ಟು ದಿನ ಸಹಿಸಿಕೊಳ್ಳಬೇಕು? ಬೇಕಿದ್ದರೆ ಈ ಪ್ರಕರಣದಲ್ಲಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಹೆಸರನ್ನೂ ಸೇರಿಸಿಬಿಡಿ" ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಕಾನೂನು ಕ್ರಮದ ಎಚ್ಚರಿಕೆ: ದಿಶಾ ಸಾವು ದುರದೃಷ್ಟಕರವೇ ಹೊರತು ತಮ್ಮ ಕುಟುಂಬಕ್ಕೂ ಅದಕ್ಕೂ ಸಂಬಂಧವಿಲ್ಲ. ಎಸ್‌ಐಟಿ ತನಿಖೆ ನಡೆಯುತ್ತಿರುವ ಕಾರಣ ತಾವು ಸುಮ್ಮನಿದ್ದೆವು. ಇನ್ನು ಮುಂದೆಯೂ ಈ ಅರ್ಥಹೀನ ಚಾರಿತ್ರ್ಯ ವಧೆ ಮುಂದುವರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ದಿಶಾಳನ್ನು ಎಂದಿಗೂ ಭೇಟಿಯಾಗಿಲ್ಲ - ಆದಿತ್ಯ ಠಾಕ್ರೆ ಸ್ಪಷ್ಟನೆ
ಈ ವಿವಾದದ ಕೇಂದ್ರಬಿಂದುವಾಗಿರುವ ಶಾಸಕ ಆದಿತ್ಯ ಠಾಕ್ರೆ ಎಕ್ಸ್ (X) ನಲ್ಲಿ ಮೌನ ಮುರಿದ್ದಾರೆ. ನಾನು ನನ್ನ ಜೀವನದಲ್ಲಿ ಎಂದಿಗೂ ದಿಶಾ ಸಾಲಿಯನ್ ರನ್ನು ಭೇಟಿಯಾಗಿಲ್ಲ, ಅವರ ಪರಿಚಯವೂ ನನಗೆ ಇಲ್ಲ. ಕೇವಲ ರಾಜಕೀಯ ದುರ್ಬುದ್ಧಿಯಿಂದ ಕಳೆದ ಆರು ವರ್ಷಗಳಿಂದ ನನ್ನ ಹೆಸರನ್ನು ಈ ದುರಂತದೊಂದಿಗೆ ತಳುಕು ಹಾಕಲಾಗುತ್ತಿದೆ. ಇದು ಸಂಪೂರ್ಣವಾಗಿ ಪೂರ್ವನಿಯೋಜಿತ ಚಾರಿತ್ರ್ಯ ಹತ್ಯೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).