ಜೈಪುರ: ಕೋಟಿ ಕೋಟಿ ರೂಪಾಯಿ ಆಸ್ತಿ-ಪಾಸ್ತಿ, ಐಷಾರಾಮಿ ಜೀವನ ಮತ್ತು ಲಕ್ಷಾಂತರ ರೂಪಾಯಿ ವಾರ್ಷಿಕ ವಹಿವಾಟನ್ನು ಸಲೀಸಾಗಿ ತೊರೆದು, ಇಡೀ ಕುಟುಂಬವೊಂಡು ಆಧ್ಯಾತ್ಮಿಕ ಮಾರ್ಗದತ್ತ ಹೆಜ್ಜೆ ಹಾಕಿರುವುದು ಇಂದಿನ ಭೌತಿಕ ಜಗತ್ತಿನಲ್ಲಿ ಭಾರಿ ಅಚ್ಚರಿ ಮೂಡಿಸಿದೆ. ಹಣವೇ ಸರ್ವಸ್ವ ಎಂದುಕೊಳ್ಳುವ ಇಂದಿನ ಸಮಾಜದಲ್ಲಿ, ರಾಜಸ್ಥಾನದ ಮೂಲದ ಈ ಕುಟುಂಬವು ಎಲ್ಲವನ್ನೂ ತ್ಯಜಿಸಿ ಜೈನ ಸನ್ಯಾಸ ಸ್ವೀಕರಿಸಲು ಮುಂದಾಗಿರುವುದು ಇಡೀ ದೇಶದ ಗಮನ ಸೆಳೆದಿದೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಲೌಕಿಕ ಜೀವನಕ್ಕೆ ವಿದಾಯ ಹೇಳಿ ದೀಕ್ಷೆ ( asceticism ) ಪಡೆಯುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ.
ರಾಜಸ್ಥಾನದ ಉದಯಪುರ ಜಿಲ್ಲೆಯ ಜಸ್ವಂತ್ಗಢ ಗ್ರಾಮದ ಮೂಲದ 47 ವರ್ಷದ ದಿಲೀಪ್ ಭಾಯ್ ಭೋಗರ್, ಬದುಕು ಕಟ್ಟಿಕೊಳ್ಳಲು ಗುಜರಾತಿನ ಸೂರತ್ಗೆ ವಲಸೆ ಬಂದಿದ್ದರು. ಆರಂಭದಲ್ಲಿ ಅತಿ ಕಷ್ಟದಿಂದ ಕೇವಲ ಒಂದು ಬಟ್ಟೆಯ ಅಂಗಡಿಯನ್ನು ಆರಂಭಿಸಿದ್ದ ಅವರು, ತಮ್ಮ ಪರಿಶ್ರಮದಿಂದ ಹಂತ ಹಂತವಾಗಿ ವ್ಯಾಪಾರವನ್ನು ವಿಸ್ತರಿಸಿದರು. ನಂತರ ಒಂದರ ಮೇಲೊಂದರಂತೆ ಅಂಗಡಿಗಳನ್ನು ತೆರೆದು, ಯಂತ್ರಗಳನ್ನು ಅಳವಡಿಸಿ ತಮ್ಮ ವಾರ್ಷಿಕ ವ್ಯವಹಾರದ ವಹಿವಾಟನ್ನು ಬರೋಬ್ಬರಿ 15 ಕೋಟಿ ರೂಪಾಯಿಗಳಿಗೆ ಮುಟ್ಟಿಸಿದ್ದರು. ವ್ಯವಹಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಿದ್ಧತೆಯಲ್ಲಿದ್ದ ಸಂದರ್ಭದಲ್ಲೇ ಅವರ ಜೀವನದಲ್ಲಿ ದೊಡ್ಡ ತಿರುವು ಸಂಭವಿಸಿದೆ.
ವ್ಯಾಪಾರ ವಿಸ್ತರಣೆಯ ಯೋಚನೆಯಲ್ಲಿದ್ದ ದಿಲೀಪ್ ಭಾಯ್, ಜೈನ ವಿದ್ವಾಂಸರೊಬ್ಬರ ಸಂಪರ್ಕಕ್ಕೆ ಬಂದಿದ್ದು ಇವರ ಇಡೀ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿತು. ಜೈನ ಧರ್ಮದ ತತ್ವಗಳು ಮತ್ತು ಬೋಧನೆಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಕ್ರಮೇಣ ಲೌಕಿಕ ಸುಖ-ಭೋಗಗಳಿಂದ ವಿಮುಖರಾಗಿ ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರಿದರು. ಭೌತಿಕ ಸಂಪತ್ತು ಮತ್ತು ನಶ್ವರ ಬದುಕಿನ ನೈಜ ಸತ್ಯವನ್ನು ಅರಿತುಕೊಂಡ ಅವರು, ಸಂಸಾರಿಕ ಬಂಧನಗಳನ್ನು ಕಳಚಿಕೊಂಡು ಜೈನ ಸನ್ಯಾಸತ್ವದ ದಾರಿಯನ್ನು ಹಿಡಿಯಲು ನಿರ್ಧರಿಸಿದರು.
ಈ ಕುಟುಂಬದಲ್ಲಿ ಧರ್ಮದ ಹಾದಿ ಹಿಡಿದ ಮೊದಲ ವ್ಯಕ್ತಿ ಅವರ ಪುತ್ರಿ ಶೈಲಿ. 2023ರಲ್ಲೇ ಈ ಹೆಣ್ಣುಮಗಳು ದೀಕ್ಷೆ ಪಡೆದುಕೊಂಡು ಸನ್ಯಾಸತ್ವ ಸ್ವೀಕರಿಸಿದ್ದು, ಸದ್ಯ 'ಸಾಧ್ವಿ ದರ್ಶಿತಾ' ಆಗಿ ಕಠಿಣ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ. ಮಗಳ ಈ ನಿರ್ಧಾರ ಮತ್ತು ದಿಢೀರ್ ಬದಲಾವಣೆಯಿಂದ ಸ್ಫೂರ್ತಿಗೊಂಡ ತಂದೆ ದಿಲೀಪ್ ಭಾಯ್ ತಾವೂ ಆ ಮಾರ್ಗದಲ್ಲಿ ನಡೆಯಲು ಬಯಸಿದರು. ಅದಕ್ಕಾಗಿ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಾ ಬಂದ ಅವರು, ತಮ್ಮ ಆಸೆಯನ್ನು ಪತ್ನಿ ಹಾಗೂ ಇತರ ಮಕ್ಕಳ ಮುಂದೆ ವ್ಯಕ್ತಪಡಿಸಿದರು.
ಪತಿಯ ಈ ಅಧ್ಯಾತ್ಮಿಕ ನಿರ್ಧಾರಕ್ಕೆ ಪತ್ನಿ ಜ್ಯೋತಿ ಬೆನ್ (45) ಕೂಡ ಸಂಪೂರ್ಣ ಬೆಂಬಲ ಸೂಚಿಸಿದರು. ಅಷ್ಟೇ ಅಲ್ಲದೆ, ಅವರ ಇಬ್ಬರು ಹೆಣ್ಣುಮಕ್ಕಳಾದ ಛವಿ (22) ಮತ್ತು ಚಾರ್ವಿ (14) ಕೂಡ ಯಾವುದೇ ಹಿಂಜರಿಕೆಯಿಲ್ಲದೆ ತಂದೆ-ತಾಯಿಯೊಂದಿಗೆ ದೀಕ್ಷೆ ಪಡೆಯಲು ಮುಂದೆ ಬಂದರು. ಬಿಬಿಎ ಗ್ರಾಫಿಕ್ ಡಿಸೈನಿಂಗ್ ಮುಗಿಸಿ ಕರಕುಶಲ ವಸ್ತುಗಳ ಉದ್ಯಮ ನಡೆಸುತ್ತಿದ್ದ ಹಿರಿಯ ಮಗಳು ಛವಿ, ತಂದೆಯ ಆಧ್ಯಾತ್ಮಿಕ ಹಾದಿಯ ಪ್ರೇರಣೆಯಿಂದ ಕೇವಲ ನಾಲ್ಕು ತಿಂಗಳಲ್ಲಿ ತಮ್ಮ ಉದ್ಯಮವನ್ನು ತೊರೆದರು. ಇನ್ನು ಸೂರತ್ನ ಜಿಲ್ಲಾ ಮಟ್ಟದ ಫುಟ್ಬಾಲ್ ಪಟುವಾಗಿ ಮಿಂಚುತ್ತಿದ್ದ ಕಿರಿಯ ಮಗಳು ಚಾರ್ವಿ, ಒಂಬತ್ತನೇ ತರಗತಿಯ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ದೀಕ್ಷೆಗೆ ಸಜ್ಜಾಗಿದ್ದಾರೆ.
ದೀಕ್ಷೆ ಸ್ವೀಕರಿಸುವ ಮುನ್ನ ಈ ನಾಲ್ವರು ಸದಸ್ಯರು ಜೈನ ಮುನಿಗಳೊಂದಿಗೆ ಕೆಲವು ಕಾಲ ಕಳೆದು, ಸಂಯಮದ ಕಠಿಣ ನಿಯಮಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ. ಕಾಲ್ನಡಿಗೆಯ ಪ್ರಯಾಣ, ಕಟ್ಟುನಿಟ್ಟಾದ ಆಹಾರ ಪದ್ಧತಿ, ದಿನನಿತ್ಯದ ಆಚಾರ-ವಿಚಾರಗಳು ಮತ್ತು ಸನ್ಯಾಸತ್ವದ ಕಠಿಣ ಸೂತ್ರಗಳನ್ನು ಅರಿತುಕೊಂಡು ಪೂರ್ಣ ಪ್ರಮಾಣದಲ್ಲಿ ಆಧ್ಯಾತ್ಮಿಕ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ.
ಒಟ್ಟಾರೆ 15 ಕೋಟಿ ರೂಪಾಯಿಗಳ ವಹಿವಾಟು ಹಾಗೂ ಸಕಲ ಐಷಾರಾಮಿ ಸೌಲಭ್ಯಗಳನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿರುವ ಈ ಕುಟುಂಬ, ಮುಂಬರುವ ಫೆಬ್ರವರಿ 8, 2027 ರಂದು ಸೂರತ್ನಲ್ಲಿ ಅಧಿಕೃತವಾಗಿ ದೀಕ್ಷೆ ಪಡೆದು ಸಂಪೂರ್ಣ ಜೈನ ಸನ್ಯಾಸಿಗಳಾಗಿ ಹೊಸ ಬದುಕು ಆರಂಭಿಸಲಿದೆ, (ಏಜೆನ್ಸೀಸ್).