ಚಮೋಲಿ: ಉತ್ತರಾಖಂಡ್ದ ಚಮೋಲಿ ಜಿಲ್ಲೆಯ ವಿಷ್ಣಗಡ್-ಪಿಪಲ್‌ಕೋಟಿ ಜಲ ವಿದ್ಯುತ್ ಯೋಜನೆಯ ಸುರಂಗದೊಳಗೆ ಮಂಗಳವಾರ(ಡಿ. 30) ಸಂಜೆ ಕಾರ್ಮಿಕರನ್ನು & ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು ಸರಕು ರೈಲಿಗೆ ಡಿಕ್ಕಿ(Trains collide) ಹೊಡೆದಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್, ನಿನ್ನೆ ಸಂಜೆ ಟಿಎಚ್‌ಡಿಸಿ (ಭಾರತ) ನಿರ್ಮಿಸುತ್ತಿರುವ ಯೋಜನೆಯ ಪಿಪಲ್‌ಕೋಟಿ ಸುರಂಗದೊಳಗೆ ಲೋಕೋ ರೈಲು ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿ ಅಪಘಾತ ನಡೆದಿದೆ. ಈ ವೇಳೆ ರೈಲಿನಲ್ಲಿ ಒಟ್ಟು 109 ಜನರಿದ್ದರು. ಅದರಲ್ಲಿ 60 ಜನ ಗಾಯಗೊಂಡಿದ್ದಾರೆ. ಎಲ್ಲರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಲೋಕೋ ರೈಲುಗಳನ್ನು ಸುರಂಗಗಳ ಒಳಗೆ ಕಾರ್ಮಿಕರು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತದೆ ಎನ್ನಲಾಗಿದೆ. 444 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಚಮೋಲಿ ಜಿಲ್ಲೆಯ ಹೆಲಾಂಗ್ ಮತ್ತು ಪಿಪಲ್ಕೋಟಿ ನಡುವೆ ಅಲಕನಂದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ. ಮುಂದಿನ ವರ್ಷ ಇದು ಪೂರ್ಣವಾಗುವ ಗುರಿಯಿದೆ (ಏಜೆನ್ಸೀಸ್).