- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ
- ಭಾರತದಲ್ಲಿ ಸಿಲಿಂಡರ್ ಅಲಭ್ಯದ ಬಗ್ಗೆ ವದಂತಿ
- ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಇಬ್ಬರು ವೃದ್ಧರ ದುರ್ಮರಣ
ಫರೂಕಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿಯಿಂದ ದೇಶದಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆಗಳು ವರದಿಯಾಗುತ್ತಿವೆ.
ತಮಿಳುನಾಡಿನಲ್ಲಿ ಜನರು ಪೆಟ್ರೋಲ್ ಸಿಗುವುದಿಲ್ಲ ಎಂದು 20 ಲೀಟರ್ ನೀರಿನ ಕ್ಯಾನ್ ಹಿಡಿದು ಪೆಟ್ರೋಲ್ ಬಂಕ್ಗೆ ಮುತ್ತಿಗೆ ಹಾಕುತ್ತಿದ್ದರೆ, ಈಗ ಉತ್ತರ ಪ್ರದೇಶದ ಫರೂಕಾಬಾದ್ನಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಮುಕ್ತಾರ್ ಅನ್ಸಾರಿ (75) ಎಂದು ಗುರುತಿಸಲಾಗಿದ್ದು, ಗ್ಯಾಸ್ ಸಿಲಿಂಡರ್ ಪಡೆಯಲು ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದು, ಗ್ಯಾಸ್ ಏಜನ್ಸಿ ಮುಂದೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೊದೊಯ್ಯಲಾಗಿದೆ, ಆದರೆ ಆತ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮುಂಜಾನೆ 6.00 ಕ್ಕೆ ಏಜನ್ಸಿಗೆ ಹೋಗಿದ್ದ ಅನ್ಸಾರಿ
ದೇಶದಲ್ಲಿ ಸಿಲಿಂಡರ್ ಪೂರೈಕೆ ನಿಲ್ಲಲಿದೆ ಎಂಬ ವದಂತಿಯನ್ನು ನಂಬಿದ ಅನ್ಸಾರಿ, ಬೆಳಿಗ್ಗೆ 6 ಗಂಟೆಗೆ ಎದ್ದು, ಗ್ಯಾಸ್ ಏಜನ್ಸಿ ಕಡೆಗೆ ಹೋಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಮುಖ್ತಾರ್ ಅನ್ಸಾರಿಗೆ ಹಲವು ರೀತಿಯ ಕಾಯಿಲೆಗಳಿದ್ದು, ಅದರೆ ಪಕ್ಕದ ಮನೆಯವರು ಪದೇ-ಪದೇ ಗ್ಯಾಸ್ ಏಜನ್ಸಿಗೆ ಭೇಟಿ ನೀಡುತ್ತಿದ್ದ ಹಿನ್ನಲೆ, ಇವರು ಸಹ ನಮ್ಮ ಮನೆಗೂ ಸಿಲಿಂಡರ್ನ ಅವಶ್ಯಕತೆಯಿದೆ ಎಂದು ಹೇಳಿ ಇಂದು (ಮಾ.14) ಏಜನ್ಸಿ ಕಡೆಗೆ ಹೋಗಿದ್ದಾರೆ. ನಂತರ ನಮಗೆ ಅವರು ಮೃತಪಟ್ಟ ಕುರಿತು ಮಾಹಿತಿ ದೊರೆತಿದೆ ಎಂದು ಮನೆಯವರು ಹೇಳಿದ್ದಾರೆ.
ಪಂಜಾಬಿನಲ್ಲಿ ಇಂತಹದ್ದೆ ಘಟನೆ
ಪಂಜಾಬ್‌ನ ಬರ್ನಾಲಾದಲ್ಲಿ ಗ್ಯಾಸ್ ಸಿಲಿಂಡರ್ ತರಲು ಹೋಗಿದ್ದ ಭೂಷಣ್ ಕುಮಾರ್ ಮಿತ್ತಲ್ (66) ಎಂಬ ವ್ಯಕ್ತಿಯು ಸರತಿ ಸಾಲಿನಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಊರಿನಲ್ಲಿ ಸರಿಯಾಗಿ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ ಎಂದು ಏಜನ್ಸಿಗೆ ಹೋಗಿ ಸಿಲಿಂಡರ್ ಪಡೆಯಲು ಹೋಗಿದ್ದ ಭೂಷಣ್ ಕುಮಾರ್ ಈಗ ಬಾರದ ಲೋಕಕ್ಕೆ ತೆರಳಿರುವುದು ದುಃಖದ ಸಂಗತಿಯಾಗಿದೆ.
ಯಾರೂ ವದಂತಿಗಳಿಗೆ ಕಿವಿಗೊಡಬೇಡಿ
ಇರಾನ್-ಅಮೆರಿಕ ಯುದ್ಧದಿಂದ ಭಾರತದಲ್ಲಿ ಪೆಟ್ರೋಲ್, ಸಿಲಿಂಡರ್ ಪೂರೈಕೆ ವ್ಯತ್ಯಯವಾಗಲಿದೆ ಎಂಬ ವಿಷಯಕ್ಕೆ ಶುಕ್ರವಾರ (ಮಾ.13) ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಭಾರತದಲ್ಲಿ ಇಂಧನ ಪೂರೈಕೆ ಸುರಕ್ಷತವಾಗಿದೆ ಜನರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಪರಿಣಾಮವಾಗಿ, ಈ ಇಂಧನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಶರ್ಮಾ ತಿಳಿಸಿದರು.
ದೇಶದಲ್ಲಿರುವ ಎಲ್ಲಾ ಸಂಸ್ಕರಣಾಗಾರಗಳು ಪ್ರಸ್ತುತ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಕರಣಾಗಾರಗಳು ಕಚ್ಚಾ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿವೆ ಮತ್ತು ಇದಲ್ಲದೆ, ಸರಬರಾಜುಗಳನ್ನು ಸ್ಥಿರವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು,(ಏಜನ್ಸೀಸ್).