ಹರಿಯಾಣ: ಕೆಲ ದಿನಗಳ ಹಿಂದೆ ಪಂಚಕುಲದ ಶಾಲೆಯೊಂದರಲ್ಲಿ ನಡೆದಿದ್ದ ಭೀಕರ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 8 ವರ್ಷದ ಬಾಲಕನೊಬ್ಬ 6 ವರ್ಷದ ಬಾಲಕಿ ಮೇಲೆ ಭೀಕರ ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ದೃಶ್ಯಗಳು ವೈರಲ್ ಆಗಿದ್ದವು. ಈ ಕುರಿತಂತೆ ಆ ಬಾಲಕನ ಬಗ್ಗೆ ಅವನ ಮನಸ್ಥಿತಿ ಬಗ್ಗೆ ಪೊಲೀಸರು ಆತನ ಕುಟುಂಬಸ್ಥರಲ್ಲಿ ವಿಚಾರಣೆ ನಡೆಸಿದಾಗ ಕೆಲ ಆಘಾತಕಾತಿ ಸಂಗತಿಗಳು ಬಯಲಾಗಿವೆ.
ಈ ಘಟನೆ ಕುರಿತಂತೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆ ಆಗಂತುಕ ಬಾಲಕನ ಮಾವ ನೀಡಿರುವ ಹೇಳಿಕೆ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ಅವನು ದಿನಾಲೂ ಮನೆಯಲ್ಲಿ ಪಬ್ಜಿ (PUBG) ಗೇಮ್ ಆಡುತ್ತಿದ್ದ, ದಿನಾಲೂ ಮೊಬೈಲ್ ಹಿಡಿದುಕೊಂಡು, ಗನ್ನಿಂದ ಡಂ..ಡಂ.. ಎನ್ನಿಸುತ್ತಲೇ ಇರುತ್ತಿದ್ದ. ಪಬ್ಜಿ (PUBG) ಸೇರಿದಂತೆ ಇನ್ನು ಹಲವು ಹಿಂಸಾತ್ಮಕ ಆಟಗಳನ್ನು ಅವನು ಮೊಬೈಲ್ನಲ್ಲಿ ಆಡುತ್ತಿದ್ದ. ಇದರಿಂದಲೇ ಅವನಲ್ಲಿ ಕ್ರೌರ್ಯ ಬೆಳೆದಿರಬೇಕೆಂದು ಅನುಮಾನಿಸಿದ್ದಾರೆ.
ಇನ್ನು ಹಲ್ಲೆಗೊಳಗಾದ ಬಾಲಕಿ ತಂದೆ ಹೇಳುವಂತೆ, ಈ ಬಾಲಕ ಮೊದಲು ತಮ್ಮ ಮಗಳಿಗೆ ಚುಡಾಯಿಸಿದ್ದಾನೆ. ನೀನು ಹಚ್ಚಿ ಎಂದೆಲ್ಲಾ ಕರೆದಿದ್ದಾನೆ. ಅದಕ್ಕೆ ಅವಳು ಅವನಿಗೆ ಮರು ಉತ್ತರ ನೀಡಿದ್ದಾಳೆ. ಇದರಿಂದ ಕೋಪಗೊಂಡ ಬಾಲಕ ಆಕೆಯನ್ನು ಶಾಲಾ ಅವಧಿ ಮುಗಿದ ನಂತರ ಒಂಟಿ ಕೊಠಡಿಯೊಳಗೆ ಕರೆದೊಯ್ದು ಮನಸೋಇಚ್ಛೆ ಥಳಿಸಿದ್ದಾನೆಂದು ಬಾಲಕಿ ತಂದೆ ಆರೋಪಿಸಿದ್ದಾರೆ.
ನಂತರ ತಮ್ಮ ಮಗಳ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಘಟನೆ ನಡೆದ ಸುಮಾರು 40 ಗಂಟೆ ವರೆಗೆ ಅವಳಿಗೆ ಪ್ರಜ್ಞೆ ಬಂದಿರಲಿಲ್ಲ. ಆ ನಂತರ ಅವಳು ವೈದ್ಯರ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡಲು ಶುರು ಮಾಡಿದಳು. ಈಗ ಆಕೆಯ ಸ್ಥಿತಿ ನಾರ್ಮಲ್ ಆಗಿದ್ದು, ಇನ್ನು ಕೆಲ ದಿನಗಳಲ್ಲಿ ಅವಳ ದೇಹ ಸ್ಥಿತಿ ಸುಧಾರಿಸುವುದಾಗಿ ವೈದ್ಯರು ತಿಳಿಸಿದ್ದಾರೆಂದು ಬಾಲಕಿ ತಂದೆ ತಿಳಿಸಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಲಾ ಶಿಕ್ಷಣ ಇಲಾಖೆ ಕೂಡಲೇ ಶಾಲಾ ಮುಖ್ಯೋಪಾಧ್ಯಾಯರನ್ನು ಸೇವೆಯಿಂದ ಅಮಾನತ್ ಮಾಡಿ ಆದೇಶಿಸಿದೆ. ಹಾಗೂ ಈ ಘಟನೆ ನಡೆಯಲು ನಿಜವಾಗಿ ಏನು ಕಾರಣವೆಂದು ಪತ್ತೆ ಹಚ್ಚುತ್ತಿದೆ. ಇತ್ತ, ಇನ್ನೊಂದು ಕಡೆ ಪೊಲೀಸರು ಕೂಡ ದೂರನ್ನು ದಾಖಲಿಸಿಕೊಂಡಿದ್ದು, ಹುಡುಗನ ಮಾನಸಿಕ ಸ್ಥಿತಿ ಬಗ್ಗೆ ತನಿಖೆ ನಡೆಸುತ್ತಿದ್ದು, ಆತನನ್ನು ರಿಮೈಂಡ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದ್ದಾಗಿ ತಿಳಿದುಬಂದಿದೆ, (ಏಜೆನ್ಸೀಸ್).