ಹೆಣ್ಣು ಮಕ್ಕಳು ಸರ್ವ ಸ್ವತಂತ್ರರಾಗದ ಹೊರತು ಮದುವೆ ಆಗಬೇಡಿ: ಕಂಗನಾ ರಣಾವತ್​ 
ದೇಶ

ತ್ವಿಶಾ ಶರ್ಮಾ ಆತ್ಮಹತ್ಯೆ ಕೇಸ್: ಸರ್ವ ಸ್ವತಂತ್ರರಾದ ಹೊರತು ಮದುವೆ ಬೇಡ; ಸಮಾಜದ ಧೋರಣೆ ವಿರುದ್ಧ ಕಂಗನಾ ಕಿಡಿ! Kangana Ranaut on Twisha Sharma

ಪ್ರಮುಖ ಮುಖ್ಯಾಂಶಗಳು

  • ನಟಿ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ
  • ಹೆಣ್ಣು ಮಕ್ಕಳು ಸರ್ವ ಸ್ವತಂತ್ರರಾಗದ ಹೊರತು ಮದುವೆ ಆಗಬೇಡಿ: ಕಂಗನಾ ರಣಾವತ್​
  • ಪಾಲಕರು ಸಮಾಜಕ್ಕೆ ಹೆದರುವುದನ್ನು ನಿಲ್ಲಿಸಿ
ನವದೆಹಲಿ: ಇತ್ತೀಚೆಗೆ ಭೋಪಾಲ್​ನಲ್ಲಿ ನೋಯ್ಡಾ ಮೂಲದ ತ್ವಿಶಾ ಶರ್ಮಾ (Twisha Sharma) ಎಂಬ ಮಹಿಳೆ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಈಗ ಇದಕ್ಕೆ ಬಾಲಿವುಡ್​ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut on Twisha Sharma)​ ಪ್ರತಿಕ್ರಿಯೆ ನೀಡಿದ್ದಾರೆ.

ಕಂಗನಾ ಹೇಳಿದ್ದೇನು?

ವಿವಾಹದ ನಂತರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತ ಸುದ್ದಿಗಳು ದಿನನಿತ್ಯ ಕೇಳಿಬರುವಂತಾಗಿದೆ. ವಿದ್ಯಾವಂತ ಮಹಿಳೆಯರು ತಮಗಾಗುತ್ತಿರುವ ಹಿಂಸೆ ಬಗ್ಗೆ ತಮ್ಮ ಪಾಲಕರಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ಪೋಷಕರು ಸಮಾಜ ಏನು ತಿಳಿಯುತ್ತದೆಯೋ? ಎಂಬ ಭಾವ ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಅಂತೆಯೇ ಭಾರತೀಯ ಸಮಾಜವು ಮದುವೆಯಾದ ನಂತರ ಹೆಣ್ಣುಮಕ್ಕಳು ತವರಿಂದ ಆಚೆಗೆ ಎಂಬ ಧೋರಣೆ ಹೊಂದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಬರೆದುಕೊಂಡಿದ್ದಾರೆ.
ಯುವತಿಯರು ಸರ್ವ ಸ್ವತಂತ್ರರಾದ ನಂತರ ಮದುವೆ ಬಗ್ಗೆ ಯೋಚಿಸಬೇಕು ಎನ್ನುವುದು ನನ್ನ ಸಲಹೆ. ನಿಮ್ಮ ವೃತ್ತಿ ಜೀವನ ಎಲ್ಲರಿಗಿಂತ ಪ್ರಮುಖವಾಗಿರಬೇಕು. ನೀವು ಯಾರು ಮತ್ತು ನೀವು ಯಾರನ್ನು ಮದುವೆಯಾಗುತ್ತಿದ್ದಿರಿ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಒಂದು ವೇಳೆ ಕಷ್ಟದಲ್ಲಿ ಸಿಲುಕಿಕೊಂಡರು ನಿವೊಬ್ಬರೆ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲಿರಬೇಕು. ನಿಮಗೆ ಯಾವ ರೀತಿಯ ಜೀವನ ಬೇಕೋ ಅದನ್ನು ಆರಿಸಿಕೊಳ್ಳಿ, ಬೇರೆಯವರ ಮಾತನ್ನು ಕೇಳಿ ಹಳ್ಳಕ್ಕೆ ಬೀಳಬೇಡಿ ಎಂದು ಅವರು ಹೇಳಿದ್ದಾರೆ.

ಏನಿದು ತ್ವಿಶಾ ಶರ್ಮಾ ಪ್ರಕರಣ?

33 ವರ್ಷದ ತ್ವಿಶಾ ಶರ್ಮಾ ನೊಯ್ಡಾ ಮೂಲದವರಾಗಿದ್ದು, ಎಂಬಿಎ (MBA) ಪದವೀಧರೆಯಾಗಿದ್ದರು. ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಅವರು, ಮಾಜಿ ಮಿಸ್ ಪುಣೆ (Miss Pune) ಪ್ರಶಸ್ತಿ ವಿಜೇತೆಯೂ ಆಗಿದ್ದರು ಮತ್ತು ತೆಲುಗಿನ ಮುಗ್ಗುರು ಮೊನಗಾಳ್ಳು ಚಿತ್ರದಲ್ಲೂ ನಟಿಸಿದ್ದರು.
2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು ಭೇಟಿಯಾಗಿದ್ದ ತ್ವಿಶಾ, ಡಿಸೆಂಬರ್ 2025 ರಲ್ಲಿ ಅವರೊಂದಿಗೆ ವಿವಾಹವಾಗಿದ್ದರು.
ಮದುವೆಯಾದ ಕೇವಲ 5 ತಿಂಗಳಲ್ಲೇ, ಅಂದರೆ ಮೇ 12, 2026 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ಮನೆಯ ತಾರಸಿಯಲ್ಲಿ ತ್ವಿಶಾ ಶರ್ಮಾ ಜಿಮ್ನಾಸ್ಟಿಕ್ ರಿಂಗ್ ಹಗ್ಗಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇ 13 ರಂದು ಮಧ್ಯರಾತ್ರಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಭೋಪಾಲ್‌ನ (AIIMS Bhopal) ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ತ್ವಿಶಾ ಅವರ ಸಾವು ನೇಣು ಬಿಗಿದುಕೊಂಡಿದ್ದರಿಂದ ಸಂಭವಿಸಿದೆ ಹಾಗೂ ಇದು ಆತ್ಮಹತ್ಯೆ ಎಂದು ವರದಿ ಹೇಳಿದೆ. ಅವರ ದೇಹದ ಮೇಲೆ (ಕೈ, ಮಣಿಕಟ್ಟು ಮತ್ತು ತಲೆಯ ಭಾಗದಲ್ಲಿ) ಕೆಲವು ಸಣ್ಣಪುಟ್ಟ ಗಾಯದ ಗುರುತುಗಳು ಪತ್ತೆಯಾಗಿವೆ. ಸಾವು ಸಂಭವಿಸುವ ಒಂದು ವಾರದ ಮುಂಚೆ ಅವರು ಗರ್ಭಪಾತ (MTP) ಮಾಡಿಸಿಕೊಂಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಮುಂದುವರೆದ ತನಿಖೆ
ಭೋಪಾಲ್ ಪೊಲೀಸರು ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಸಾವು ಮತ್ತು ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ಅತ್ತೆ ಗಿರಿಬಾಲಾ ಸಿಂಗ್ ಅವರಿಗೆ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರೆತಿದೆ.
ಆದರೆ, ಪತಿ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆತ ದೇಶ ಬಿಟ್ಟು ಹೋಗದಂತೆ ತಡೆಯಲು ಪೊಲೀಸರು ಲುಕ್‌ಔಟ್ ನೋಟಿಸ್ (Lookout Notice) ಜಾರಿಗೊಳಿಸಿದ್ದಾರೆ ಮತ್ತು ಆತನ ಪತ್ತೆಗೆ 6 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ, (ಏಜನ್ಸೀಸ್​).