Tamil Nadu Politics | ಸಿಪಿಎಂ ಎಚ್ಚರಿಕೆ ನಡುವೆಯೇ ಮಿತ್ರಪಕ್ಷಗಳಿಗೆ ಸಂಪುಟ ಸೇರಲು ಆಹ್ವಾನ! 
ದೇಶ

ಎಐಎಡಿಎಂಕೆ ಸಂಪುಟ ಸೇರ್ಪಡೆ ವದಂತಿ ತಳ್ಳಿಹಾಕಿದ ಟಿವಿಕೆ; ಸಿಪಿಎಂ ಎಚ್ಚರಿಕೆ ನಡುವೆಯೇ ಮಿತ್ರಪಕ್ಷಗಳಿಗೆ ಸಂಪುಟ ಸೇರಲು ಆಹ್ವಾನ! | Tamil Nadu Politics

Tamil Nadu Politics: ತಮಿಳುನಾಡು ಮೈತ್ರಿ ಸರ್ಕಾರಕ್ಕೆ ಎಐಎಡಿಎಂಕೆ ಬಣವನ್ನು ಸೇರಿಸಿಕೊಂಡರೆ, ಸಿಎಂ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಸಿಪಿಎಂ ವಾಪಸ್ ಪಡೆಯಲಿದೆ ಎಂಬ ವದಂತಿಗಳನ್ನು ಆಡಳಿತಾರೂಢ ಟಿವಿಕೆ ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೀಡಾ ಸಚಿವ ಆಧವ್ ಅರ್ಜುನ, ಸಿಪಿಎಂ ಹಾಗೂ ವಿಸಿಎಚ್ (ವಿಡುದಲೈ ಕರುತೈಗಳ್ ಕಚ್ಚಿ) ಸೇರಿದಂತೆ ನಾಲ್ಕು ಪಕ್ಷಗಳು ಸರ್ಕಾರವನ್ನು ಸೇರಬೇಕು ಎಂಬ ತಮ್ಮ ಆಹ್ವಾನವನ್ನು ಪುನರುಚ್ಚರಿಸಿದರು. ವಿಸಿಎಚ್ ಪಕ್ಷವು ಚುನಾವಣಾ ಫಲಿತಾಂಶದ ಬಳಿಕ ಬೆಂಬಲ ನೀಡುವ ಮುನ್ನ ತೀವ್ರ ರಾಜಕೀಯ ನಾಟಕೀಯ ಬೆಳವಣಿಗೆಗೆ ಕಾರಣವಾಗಿತ್ತು. ಆದರೆ ಸಂಪುಟ ವಿಸ್ತರಣೆಯ ನಿರ್ದಿಷ್ಟ ವಿವರಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅರ್ಜುನ, ಟಿವಿಕೆ ಮುಖ್ಯಸ್ಥ ವಿಜಯ್ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿಸಿದರು.
ಮೈತ್ರಿಕೂಟದಲ್ಲಿ 5 ಸ್ಥಾನಗಳನ್ನು ಹೊಂದಿರುವ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಅಧಿಕಾರ ಹಂಚಿಕೊಳ್ಳುವ ನಿರೀಕ್ಷೆಯಿದೆ ಎಂದು ಅರ್ಜುನ ಖಚಿತಪಡಿಸಿದರು. ಪ್ರಸ್ತುತ ತಲಾ ಎರಡು ಸ್ಥಾನಗಳಂತೆ ಒಟ್ಟು 8 ಸ್ಥಾನಗಳನ್ನು ಹೊಂದಿರುವ ಸಿಪಿಎಂ, ಸಿಪಿಐ, ವಿಸಿಎಚ್ ಮತ್ತು ಐಯುಎಂಎಲ್ ಪಕ್ಷಗಳು ಸದ್ಯಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಮುಖ್ಯಮಂತ್ರಿಗಳು ಸಿಪಿಎಂ, ಸಿಪಿಐ, ವಿಸಿಎಚ್ (ತಿರುಮಾವಳವನ್ ನೇತೃತ್ವದ) ಮತ್ತು ಐಯುಎಂಎಲ್ ಪಕ್ಷಗಳಿಗೆ ಸರ್ಕಾರ ಸೇರಲು ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ. ಇದು ಅವರ ಇಚ್ಛೆ ಮತ್ತು ಕನಸಾಗಿದೆ ಎಂದು ಆಧವ್ ಅರ್ಜುನ್​ ಹೇಳಿದರು.

ರಾಜಕೀಯ ಮೈತ್ರಿ ಮತ್ತು ಬಹುಮತದ ಲೆಕ್ಕಾಚಾರ

ಏಪ್ರಿಲ್ 23ರ ಚುನಾವಣೆಯಲ್ಲಿ ಅತಂತ್ರ ತೀರ್ಪು ಬಂದ ಬಳಿಕ, ಡಿಎಂಕೆ ಮತ್ತು ಎಐಎಡಿಎಂಕೆಯ ಒಂದು ಬಣ ಜನಾದೇಶವನ್ನು ಉಲ್ಲಂಘಿಸಿ ಅಧಿಕಾರ ಹಿಡಿಯಲು ಮೈತ್ರಿಗೆ ಯತ್ನಿಸಿದ್ದವು ಎಂದು ಅರ್ಜುನ ಆರೋಪಿಸಿದ್ದು, ಪ್ರಜಾಪ್ರಭುತ್ವವನ್ನು ಉಳಿಸಲು ಈ ಎಲ್ಲಾ ಮಿತ್ರಪಕ್ಷಗಳು ಒಂದಾದವು ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನ ಒಟ್ಟು 234 ಸ್ಥಾನಗಳಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತಕ್ಕಿಂತ (118) 10 ಸ್ಥಾನಗಳ ಕೊರತೆ ಎದುರಿಸಿತ್ತು. ಈ ವೇಳೆ ಕಳೆದ 62 ವರ್ಷಗಳಿಂದ ತಮಿಳುನಾಡು ರಾಜಕೀಯವನ್ನು ಆಳಿದ್ದ ಸಾಂಪ್ರದಾಯಿಕ ಎದುರಾಳಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದವು.
ಅಂತಿಮವಾಗಿ ಕಾಂಗ್ರೆಸ್, ವಿಸಿಎಚ್, ಸಿಪಿಎಂ, ಸಿಪಿಐ ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಟಿವಿಕೆ ಅಧಿಕಾರ ಚುಕ್ಕಾಣಿ ಹಿಡಿಯಿತು. ಇದರೊಂದಿಗೆ ಜೋಸೆಫ್ ವಿಜಯ್ ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು, ಜಯಲಲಿತಾ ಬಳಿಕ ತಮಿಳುನಾಡಿನ ಮುಖ್ಯಮಂತ್ರಿಯಾದ ಮೊದಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಎಐಎಡಿಎಂಕೆ ಸೋಲಿಗೆ ಕಾರಣ ಎಂದು ಪಳನಿಸ್ವಾಮಿ ನಿರ್ಧಾರಗಳನ್ನು ಟೀಕಿಸಿದ ಸಚಿವ ಅರ್ಜುನ್​, ಡಿಎಂಕೆ ಜೊತೆಗಿನ ಹೊಂದಾಣಿಕೆ ತಪ್ಪು ಎಂಬುದನ್ನು ಅರಿತ ಎಐಎಡಿಎಂಕೆ ಶಾಸಕರು ಟಿವಿಕೆಯನ್ನು ಬೆಂಬಲಿಸಿದರು ಎಂದರು. ಕಳೆದ ವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಇಪಿಎಸ್ ನಿರ್ಧಾರವನ್ನು ವಿರೋಧಿಸಿ ಟಿವಿಕೆ ಪರ ಮತ ಚಲಾಯಿಸಿದ 25 ಬಂಡಾಯ ಎಐಎಡಿಎಂಕೆ ಶಾಸಕರ ನಡೆಗೆ ಇದೇ ರಾಜಕೀಯ ಹಿನ್ನೆಲೆ ಇದೆ ಎಂದು ಅವರು ವಿವರಿಸಿದರು. ಸಿ.ವಿ. ಷಣ್ಮುಗಂ ನೇತೃತ್ವದ ಈ ಬಣ ಅಧಿಕಾರದಾಸೆಗಾಗಿ ಈ ನಿರ್ಧಾರ ಕೈಗೊಂಡಿಲ್ಲ, ಅವರು ತಮ್ಮ ಮುಂದಿನ ನಡೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಸಂಖ್ಯಾ ಬಲದ ಸೂಕ್ಷ್ಮತೆ

ವಿಜಯ್ ತಾವು ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ತಿರುಚ್ಚಿ (ಪೂರ್ವ) ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107ಕ್ಕೆ ಕುಸಿದಿದೆ. ಕಾಂಗ್ರೆಸ್‌ನ 5 ಮತ್ತು ಇತರ ಮಿತ್ರಪಕ್ಷಗಳ 8 ಸ್ಥಾನಗಳು ಸೇರಿದರೆ ಒಟ್ಟು ಮೈತ್ರಿಕೂಟದ ಬಲ 120 ಆಗುತ್ತದೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಪ್ರಸ್ತುತ ಕೇವಲ 2 ಸ್ಥಾನಗಳ ಅತ್ಯಲ್ಪ ಮುನ್ನಡೆ ಇದೆ.
ಒಂದು ವೇಳೆ ಸಿ.ವಿ. ಷಣ್ಮುಗಂ ನೇತೃತ್ವದ ಸುಮಾರು 25 ಬಂಡಾಯ ಎಐಎಡಿಎಂಕೆ ಶಾಸಕರು ಮೈತ್ರಿಕೂಟಕ್ಕೆ ಸೇರಿದರೆ ಸರ್ಕಾರದ ಬಲ ಹೆಚ್ಚಾಗಲಿದೆ. ಇದರಿಂದ ಬೇಸತ್ತು ಎಡಪಕ್ಷಗಳು ಮತ್ತು ವಿಸಿಎಚ್ ಬೆಂಬಲ ಹಿಂತೆಗೆದುಕೊಂಡರೂ, ಟಿವಿಕೆ ಮೈತ್ರಿಕೂಟವು ಬಹುಮತಕ್ಕಿಂತ 19 ಸ್ಥಾನಗಳ ಅಧಿಕ ಮುನ್ನಡೆ ಕಾಯ್ದುಕೊಳ್ಳಲಿದೆ. ಈ ಸೂಕ್ಷ್ಮ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ಸಂಪುಟ ವಿಸ್ತರಣೆಯ ವದಂತಿಗಳು ಮತ್ತು ಆಧವ್ ಅರ್ಜುನ ಸ್ಪಷ್ಟನೆ ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್​​).