ದೇಶ

ಭಾರತವನ್ನು ಉತ್ತುಂಗಕ್ಕೇರಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷರ ಬೇಸರದ ಹೇಳಿಕೆ ವೈರಲ್! | Aleksandar Vucic

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಅದನ್ನು ಪ್ರಬಲ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಸರ್ಬಿಯಾದ ಮಾಜಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ (Aleksandar Vucic) ತಿಳಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಅದನ್ನು ಪ್ರಬಲ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಸರ್ಬಿಯಾದ ಮಾಜಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ (Aleksandar Vucic) ತಿಳಿಸಿದ್ದಾರೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರನ್ನು ಕುಗ್ಗಿಸಲು ಮತ್ತು ಹತ್ತಿಕ್ಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪಾಡ್‌ಕಾಸ್ಟ್ ಒಂದರಲ್ಲಿ ವುಸಿಕ್ ನೀಡಿರುವ ಈ ಹೇಳಿಕೆಯ ತುಣುಕು ಬುಧವಾರ ವೈರಲ್ ಆಗಿದ್ದು, ಪ್ರಧಾನಿ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು ಸರ್ಬಿಯಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ವುಸಿಕ್, ಜಾಗತಿಕವಾಗಿ ನಾಯಕರನ್ನು ಕುಗ್ಗಿಸುವ ಪ್ರಯತ್ನಗಳ ಪ್ರವೃತ್ತಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಪ್ರಧಾನಿ ಮೋದಿ ಅವರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ ವುಸಿಕ್, ಅವರು ಭಾರತವನ್ನು ಪ್ರಮುಖ ಜಾಗತಿಕ ಶಕ್ತಿಯನ್ನಾಗಿ ಅಪಾರವಾದ ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಆ ದಿನ ಈ ಊಹೆ ಇರಲಿಲ್ಲ, ಇವತ್ತು 25 ವರ್ಷಗಳ ಇತಿಹಾಸ!...ಮೊದಲ ಬಾರಿ ಸಿಎಂ ಆದ ದಿನವನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ! | Narendra Modi

ನೀವು ನರೇಂದ್ರ ಮೋದಿಯಂತಹ ನಾಯಕನನ್ನು ಹೊಂದಿದ್ದೀರಿ. ಮತ್ತು ಈಗ ಅವರನ್ನು ಕುಗ್ಗಿಸಲು ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಭಾರತವನ್ನು ಉತ್ತುಂಗಕ್ಕೇರಿಸಿದ್ದಾರೆ. ಅವರು ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ ಎಂದು ವುಸಿಕ್ ತಿಳಿಸಿದರು. ಅವರ ಕಾರಣದಿಂದಾಗಿ ಭಾರತವು ವಿಶ್ವ ವೇದಿಕೆಯಲ್ಲಿ ಅಷ್ಟು ಬಲಿಷ್ಠ ಶಕ್ತಿಯಾಯಿತು. ಅವರು ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ, ಆದರೂ ಅವರು ವಿಫಲರಾಗಿದ್ದಾರೆ ಎಂದು ಹೇಳುವ ಮೂಲಕ ಅಥವಾ ಇನ್ನೇನೋ ಹೇಳುವ ಮೂಲಕ ಅವರನ್ನು ಕೆಳಗೆಳೆಯಲು ಪ್ರಯತ್ನಿಸುತ್ತಾರೆ. ಇದು ಒಂದು ಮಾದರಿಯಾಗಿಬಿಟ್ಟಿದೆ ಎಂದು ವುಸಿಕ್ ಹೇಳಿದರು.

ಸರ್ಬಿಯಾದ ಮಾಜಿ ಅಧ್ಯಕ್ಷರ ಈ ಹೇಳಿಕೆಯನ್ನು ಬಿಜೆಪಿ ತಕ್ಷಣವೇ ಮುನ್ನೆಲೆಗೆ ತಂದಿದ್ದು, ಇದು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಿಕ್ಕ ಜಾಗತಿಕ ಮನ್ನಣೆ ಎಂದು ಬಿಂಬಿಸಿದೆ. ವಿಶ್ವ ನಾಯಕರು ನಮ್ಮ ಪ್ರಧಾನಿಯವರ ಬಗ್ಗೆ ಈ ರೀತಿ ಮಾತನಾಡುವಾಗ, ಅದು ಎಲ್ಲವನ್ನೂ ಹೇಳುತ್ತದೆ. ಪ್ರಧಾನಿ ಮೋದಿ ನೇತೃತ್ವದ ಭಾರತವು ಮೇಲಕ್ಕೇರುತ್ತಿದೆ ಮತ್ತು ಜಗತ್ತು ಗಮನಿಸುತ್ತಿದೆ ಎಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಈ ಹೇಳಿಕೆಯನ್ನು ಬಿಜೆಪಿಯ ಹಿರಿಯ ನಾಯಕರು ಮತ್ತು ವಕ್ತಾರರು ಕೂಡ ಹಂಚಿಕೊಂಡಿದ್ದಾರೆ. ಭಾರತದ ಮತದಾರರು ಪ್ರಧಾನಿ ಮೋದಿಗೆ ನೀಡಿರುವ ಜನಾದೇಶವನ್ನು ಅಸ್ಥಿರಗೊಳಿಸಲು ಮತ್ತು ಕುಗ್ಗಿಸಲು ನಡೆಯುತ್ತಿರುವ ಯತ್ನಗಳ ಬಗ್ಗೆ ಸರ್ಬಿಯನ್ ಅಧ್ಯಕ್ಷರು ಮಾತನಾಡಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ವಕ್ತಾರೆ ಸಂಜು ವರ್ಮಾ ಸಹ ಪೋಸ್ಟ್ ಮಾಡಿದ್ದಾರೆ.

ಇದು ಕೆಲವೇ ಜನರಿಂದ ಸಾಧ್ಯ..ಅದರಲ್ಲಿ ನೀವು ಒಬ್ಬರು!

ಭಾರತ ಮತ್ತು ಸರ್ಬಿಯಾ ನಡುವಿನ ಸಂಬಂಧ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದ ವುಸಿಕ್, ಇದೇ ಸಂದರ್ಭದಲ್ಲಿ ಎಕ್ಸ್ ಮೂಲಕ ಪ್ರಧಾನಿ ಅವರಿಗೆ ಶುಭ ಕೋರಿದ್ದರು. ದೇಶಕ್ಕೆ ಸೇವೆ ಸಲ್ಲಿಸಲು ಕಾಲು ಶತಮಾನವನ್ನು (25 ವರ್ಷ) ಸಮರ್ಪಿಸಿದ್ದೇನೆ ಎಂದು ಹೇಳಿಕೊಳ್ಳಲು ಕೆಲವೇ ಜನರಿಗೆ ಸಾಧ್ಯವಾಗುತ್ತದೆ, ಅದರಲ್ಲಿಯೂ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ಸೇವೆ ಸಲ್ಲಿಸುವುದು ದೊಡ್ಡ ಸಾಧನೆ ಎಂದು ಅವರು ತಿಳಿಸಿದ್ದರು. ಅಲ್ಲದೆ, ಭಾರತ ಮತ್ತು ಅದರ ಭವಿಷ್ಯದ ಬಗ್ಗೆ ನೀವು ಎಷ್ಟು ಆಳವಾಗಿ ಕಾಳಜಿ ವಹಿಸುತ್ತೀರಿ ಎಂಬುದು ನನಗೆ ತಿಳಿದಿದೆ, ಮತ್ತು ನೀವು ಭಾರತವನ್ನು ಎಷ್ಟು ಎತ್ತರಕ್ಕೆ ಏರಿಸಿದ್ದೀರಿ ಎಂಬುದನ್ನು ಜಗತ್ತೇ ನೋಡುತ್ತಿದೆ ಎಂದು ವುಸಿಕ್ ಬರೆದುಕೊಂಡಿದ್ದರು.

ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಮೋದಿ ಅವರನ್ನು ಅಭಿನಂದಿಸಿದ ಮೊದಲ ನಾಯಕರಲ್ಲಿ ಸರ್ಬಿಯಾದ ಮಾಜಿ ಅಧ್ಯಕ್ಷರೂ ಒಬ್ಬರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಎಐ ಇಂಪ್ಯಾಕ್ಟ್ ಸಮ್ಮಿಟ್ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದರು. ಆ ಸಭೆಯ ಸಂದರ್ಭದಲ್ಲಿ ಅವರು ರಕ್ಷಣೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರವನ್ನು ಆಳವಾಗಿಸಲು ನಿರ್ಧರಿಸಿದ್ದರು. 2017ರ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ವುಸಿಕ್ ಭಾಗವಹಿಸಿದ ನಂತರ ಇದು ಅವರ ಎರಡನೇ ಭೇಟಿಯಾಗಿತ್ತು(ಏಜೆನ್ಸೀಸ್​).