NarendraModi - Trump 
ದೇಶ

ಮುಂದಿನ ವರ್ಷದ ಆರಂಭದಲ್ಲಿ ಟ್ರಂಪ್ ಭಾರತಕ್ಕೆ? ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾಹಿತಿ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump) ಅವರು ಮುಂದಿನ ವರ್ಷದ(2027)ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ರೂಬಿಯೊ ಈ ಮಾಹಿತಿ ನೀಡಿದ್ದಾರೆ.ಭಾರತ-ಅಮೆರಿಕ ಸಂಬಂಧ ಅತ್ಯುತ್ತಮವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ನಡುವಿನ ವೈಯಕ್ತಿಕ ಬಾಂಧವ್ಯ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ.

ಭೇಟಿಗೆ ಸಿದ್ಧತೆ

ಟ್ರಂಪ್ ಅವರ ಭಾರತ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಅಂತಿಮಗೊಳಿಸಲು ತಾವು ಈ ವರ್ಷದ ಅಂತ್ಯದೊಳಗೆ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ರೂಬಿಯೊ ತಿಳಿಸಿದ್ದಾರೆ. "ಮುಂದಿನ ವರ್ಷದ ಆರಂಭದಲ್ಲಿ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡುವಂತೆ ನಾವು ಯೋಜನೆ ರೂಪಿಸುತ್ತಿದ್ದೇವೆ. ಭಾರತ ಅಮೆರಿಕದ ಅತ್ಯಂತ ಆಪ್ತ ಪಾಲುದಾರ ಮತ್ತು ಮಿತ್ರ ರಾಷ್ಟ್ರವಾಗಿದೆ. ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ನಡುವಿನ ಸಂಬಂಧ ಅತ್ಯಂತ ಗಟ್ಟಿಯಾಗಿದೆ. ರಾಜತಾಂತ್ರಿಕ ಸಂಬಂಧಗಳಲ್ಲಿ ಇದು ಬಹಳ ಮಹತ್ವದ್ದಾಗಿದೆ," ಎಂದು ಅವರು ಹೇಳಿದ್ದಾರೆ.

ಎರಡನೇ ಅವಧಿಯ ಬಳಿಕ ಮೊದಲ ಭಾರತ ಭೇಟಿ

ಈ ಭೇಟಿ ನಡೆದರೆ, ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ಅವರ ಮೊದಲ ಭಾರತ ಪ್ರವಾಸ ಇದಾಗಲಿದೆ. ಇದಕ್ಕೂ ಮುನ್ನ ಟ್ರಂಪ್ ಅವರು 2020ರ ಫೆಬ್ರವರಿಯಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಬಳಿಕ ಎರಡನೇ ಬಾರಿ ಶ್ವೇತಭವನಕ್ಕೆ ಮರಳಿದ ನಂತರ ಅವರು ಭಾರತಕ್ಕೆ ಭೇಟಿ ನೀಡಿಲ್ಲ.

ಜಿ7 ಶೃಂಗಸಭೆಯಲ್ಲಿ ಭೇಟಿ

ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಭೇಟಿಯಾಗಿದ್ದರು. ಕಳೆದ 16 ತಿಂಗಳ ಬಳಿಕ ನಡೆದ ಅವರ ಮೊದಲ ದ್ವಿಪಕ್ಷೀಯ ಸಭೆ ಇದಾಗಿತ್ತು. ಈ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಸಹಕಾರ, ಆರ್ಥಿಕ ಸಂಬಂಧ ಹಾಗೂ ವಿವಿಧ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆದಿತ್ತು,(ಏಜೆನ್ಸೀಸ್​​).