Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ
Donald Trump: ಭಾರತವನ್ನು ನರಕದ ಕುಳಿ ಎಂದು ಹೋಲಿಸುವ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ರೀ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಸದ್ಯಕ್ಕೆ ಆ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿರುವ ಅಮೆರಿಕ ರಾಯಭಾರ ಕಚೇರಿ, ಭಾರತವು ತನ್ನ ಉತ್ತಮ ಸ್ನೇಹಿತ (ಪ್ರಧಾನಿ ನರೇಂದ್ರ ಮೋದಿ) ನೇತೃತ್ವದ ಶ್ರೇಷ್ಠ ದೇಶ ಎನ್ನುವುದು ಟ್ರಂಪ್ ನಿಲುವಾಗಿದೆ ಎಂದು ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ತಿಳಿಸಿದ್ದಾರೆ.
ಕ್ರಿಸ್ಟೋಫರ್ ಎಲ್ಮ್ಸ್ ನೀಡಿರುವ ಹೇಳಿಕೆಯ ಪ್ರಕಾರ, ಭಾರತವನ್ನು ಟ್ರಂಪ್ ಒಂದು ಶ್ರೇಷ್ಠ ರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಭಾರತದ ನಾಯಕತ್ವದೊಂದಿಗೆ (ಪ್ರಧಾನಿ ಮೋದಿ) ತಮಗೆ ಅತ್ಯಂತ ನಿಕಟವಾದ ವೈಯಕ್ತಿಕ ಸ್ನೇಹವಿದೆ ಎಂಬ ವಿಷಯವನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸೃಷ್ಟಿಯಾಗಿದ್ದ ಅಸಮಾಧಾನವನ್ನು ಶಮನಗೊಳಿಸಲು ರಾಯಭಾರ ಕಚೇರಿ ಪ್ರಯತ್ನಿಸಿದೆ.
ವಿವಾದದ ಹಿನ್ನಲೆ!...
ಈ ವಿವಾದದ ಮೂಲವು ರೇಡಿಯೋ ಕಾರ್ಯಕ್ರಮದ ನಿರೂಪಕ ಮೈಕೆಲ್ ಸ್ಯಾವೇಜ್ರ ಒಂದು ಹಳೆಯ ವಿಡಿಯೋ ಕ್ಲಿಪ್‌ನಲ್ಲಿದೆ. ಈ ವಿಡಿಯೋದಲ್ಲಿ ಸ್ಯಾವೇಜ್ ಅಮೆರಿಕದ ಅಸ್ತಿತ್ವದಲ್ಲಿರುವ ವಲಸೆ ಕಾನೂನುಗಳನ್ನು ತೀವ್ರವಾಗಿ ಟೀಕಿಸಿದ್ದರು. ಗರ್ಭಿಣಿಯರು ಪೌರತ್ವ ಪಡೆಯುವ ಉದ್ದೇಶದಿಂದಲೇ ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇಂತಹ ಅಭ್ಯಾಸಗಳಿಂದಾಗಿ ಚೀನಾ ಮತ್ತು ಭಾರತ ಅಥವಾ ಭೂಮಿಯ ಮೇಲಿನ ಯಾವುದೇ ನರಕದ ಕುಳಿಗಳಿಂದ ಕುಟುಂಬಗಳು ಅಮೆರಿಕಕ್ಕೆ ವಲಸೆ ಬರುತ್ತಿವೆ ಎಂದು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನು ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ರೀ ಪೋಸ್ಟ್ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಭಾರತದ ರಿಯಾಕ್ಷನ್..
ಭಾರತವು ಈ ಹೇಳಿಕೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಹೇಳಿಕೆಗಳು ಸ್ಪಷ್ಟವಾಗಿ ಮಾಹಿತಿಯಿಲ್ಲದ, ಅನುಚಿತ ಮತ್ತು ಕಳಪೆ ಅಭಿರುಚಿಯಿಂದ ಕೂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಮಾತುಗಳು ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳನ್ನು ಆಧರಿಸಿದ ಭಾರತ-ಅಮೆರಿಕ ಸಂಬಂಧದ ವಾಸ್ತವತೆಯನ್ನು ಯಾವುದೇ ರೀತಿಯಲ್ಲೂ ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್).