ಮಾನಹಾನಿಕರ ಪೋಸ್ಟ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಬಾಂಬೆ ಹೈಕೋರ್ಟ್ ಆದೇಶ
- ಇ-20 ಇಂಧನ ನೀತಿ ವಿರೋಧಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಟ್ರೋಲಿಂಗ್
- ಮಾನಹಾನಿಕರ ಪೋಸ್ಟ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಬಾಂಬೆ ಹೈಕೋರ್ಟ್ ಆದೇಶ
- ಎಕ್ಸ್, ಗೂಗಲ್ ಹಾಗೂ ಮೆಟಾ ಕಂಪನಿಗಳಿಗೆ ನಿರ್ದೇಶನ ನೀಡಿದ ನ್ಯಾಯಪೀಠ
ಮುಂಬೈ: ಇ-20 ಪೆಟ್ರೋಲ್ ನೀತಿಯನ್ನು ವಿರೋಧಿಸುವ ಹಿನ್ನಲೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ನೀಚ, ನಿಂದನಾತ್ಮಕ ಹಾಗೂ ಅಶ್ಲೀಲವಾದ ವಿಷಯಗಳನ್ನು ಕೂಡಲೇ ತೆಗೆದು ಹಾಕಬೇಕೆಂದು ಬುಧವಾರ (ಆ.5 ) ಬಾಂಬೆ ಹೈಕೋರ್ಟ್ (Bombay High Court on Nitin Gadkari) ನಿರ್ದೇಶಿಸಿದೆ.
ಪೆಟ್ರೋಲ್ನಲ್ಲಿ ಎಥೆನಾಲ್ ಅನ್ನು ಮಿಶ್ರಣ ಮಾಡಿ ಮಾರಾಟ ಮಾಡುವ ಇ-20 ನೀತಿಯನ್ನು ವಿರೋಧಿಸುವ ಸಲುವಾಗಿ ಸೋಷಿಯಲ್ ಮೀಡಿಯಾನಲ್ಲಿ ನಿತಿನ್ ಗಡ್ಕರಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಈ ತೇಜೋವಧೆ ಹಾಗೂ ಅಶ್ಲೀಲ ಪೋಸ್ಟ್ಗಳನ್ನು ಪ್ರಶ್ನಿಸಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದರು.
ಕೂಡಲೇ ಇವುಗಳನ್ನು ತೆಗೆದುಹಾಕಿ!
ಟ್ರೋಲ್ ಹಾಗೂ ರೋಷ್ಟ್ ವಿಡಿಯೋ ಹಾಗೂ ಪೋಸ್ಟ್ಗಳ ವಿರುದ್ಧ ಸಚಿವರು ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರೀಫ್ ಡಾಕ್ಟರ್, ಸಚಿವರ ವಿರುದ್ಧ ಈ ರೀತಿ ಅಶ್ಲೀಲ, ನಿಂದನಾತ್ಮಕ ಹಾಗೂ ತೇಜೋವಧೆ ಉಂಟುಮಾಡುವ ಪೋಸ್ಟ್ಗಳನ್ನು ಕೂಡಲೇ ತಮ್ಮ ವೇದಿಕೆಗಳಿಂದ ತೆಗೆದು ಹಾಕಬೇಕೆಂದು, ಎಕ್ಸ್ (ಟ್ವಿಟರ್), ಮೆಟಾ ಹಾಗೂ ಗೂಗಲ್ ಕಂಪನಿಗಳಿಗೆ ನ್ಯಾಯಪೀಠ ಆದೇಶಿಸಿದೆ.
ಹಾಗೂ ಕೇವಲ ಸಚಿವರು, ಪ್ರಭಾವಿಗಳು ಮಾತ್ರವಲ್ಲ, ಯಾವುದೇ ವ್ಯಕ್ತಿಯನ್ನು ಟೀಕಿಸುವ ಭರದಲ್ಲಿ ತೇಜೋವಧೆ ವ್ಯಾಪ್ತಿಗೆ ಬರುವ ವಿಷಯಗಳನ್ನು ನಿಮ್ಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ತಡೆಯಲು ವ್ಯವಸ್ಥೆಯೊಂದನ್ನು ನಿರ್ಮಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಎಥೆನಾಲ್ ನೀತಿಯಿಂದ ನಿತಿನ್ ಗಡ್ಕರಿ ಅವರ ಕುಟುಂಬ ವರ್ಗ ನೇರವಾಗಿ ಲಾಭ ಪಡೆಯುತ್ತಿದೆ ಎಂನ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಅಶ್ಲೀಲ, ನಿಂದನಾತ್ಮಕ ಹಾಗೂ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂದು ಸಚಿವರು ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು.
ಇಂದು ಇದರ ವಿಚಾರಣೆ ನಡೆಸಿದೆ, ನ್ಯಾಯಪೀಠ ವಿವಾದಾತ್ಮಕ ಪೋಸ್ಟ್ಗಳನ್ನು ತೆಗೆದುಹಾಕಬೇಕೆಂದು ನಿರ್ದೇಶನ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಿ ಅದೇಶಿಸಿದೆ, (ಏಜನ್ಸೀಸ್).