Narendra Modi | ಪ್ರಧಾನಿ ಮೋದಿ, ಟಿಎಂಸಿ ಸಂಸದೆ ಸಾಗರಿಕಾ ಘೋಷ್ 
ದೇಶ

Narendra Modi | ಬಿಹಾರದ ಗೆಲುವು ಬಂಗಾಳದ ಜಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದಿದ್ದ ಪ್ರಧಾನಿ ಮೋದಿ ವಿರುದ್ಧ ಟಿಎಂಸಿ ಕಿಡಿ!

ಕೊಲ್ಕತ್ತಾ: ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಹಾರ ಚುನಾವಣಾ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ, ಪಶ್ಚಿಮ ಬಂಗಾಳವನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೃಣಮೂಲ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಶುಕ್ರವಾರ ಸಂಜೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮುಂದಿನ ಬಂಗಾಳದ ಬಿಜೆಪಿಯ ಗೆಲುವಿಗೆ ಬಿಹಾರ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್, ಬಂಗಾಳದ ಜನರು ಬಿಜೆಪಿಯನ್ನು ಯಾವತ್ತಿಗೂ ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ತಮ್ಮ ಎಕ್ಸ್​​ ಖಾತೆಯಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿರುವ ಗೋಷ್​, ಪ್ರಧಾನಿ ನರೇಂದ್ರ ಮೋದಿ ಬಂಗಾಳವನ್ನು ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ, ರಾಜ್ಯವನ್ನು ತಮ್ಮ ದಾಖಲೆಯ ಪಟ್ಟಿಯಲ್ಲಿ ಸೇರಿಸಲು ಮತ್ತೊಂದು ಭೂಮಿಯಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮಾತಿಗೆ ಪ್ರತಿಯಾಗಿ ಕೆಲ ಅಂಶಗಳನ್ನು ಪಟ್ಟಿ ಮಾಡಿದ ಘೋಷ್, ನೀವು (ಬಿಜೆಪಿ) ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುತ್ತೀರಿ, ಬಂಗಾಳವು ಸಾಮ, ದಾಮ, ದಂಡ, ಭೇದ ರಾಜಕೀಯವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದರು( ಇದು ಪ್ರಾಚೀನ ಭಾರತೀಯ ತತ್ವಶಾಸ್ತ್ರದ ನಾಲ್ಕು ಭಾಗಗಳ ತಂತ್ರವಾಗಿದ್ದು, ಇದು ಮನವೊಲಿಸುವಿಕೆ, ಪ್ರೋತ್ಸಾಹ, ಶಿಕ್ಷೆ ಮತ್ತು ವಿಭಜನೆಗಳನ್ನು ಸೃಷ್ಟಿಸುವುದನ್ನು ಒಳಗೊಂಡಿದೆ).
ಮಮತಾ ಬ್ಯಾನರ್ಜಿ " ಹವಾಯಿ ಜಹಾಜ್ " (ವಿಮಾನ) ದಲ್ಲಿ ಹಾರುವ " ಹವಾಯಿ ನಾಯಕಿ ಅಲ್ಲ ಎಂದಿರುವ ಘೋಷ್​, ನಮ್ಮ ನಾಯಕಿ 24 ಗಂಟೆಯೂ ಜನರ ನಡುವೆ ಇರುತ್ತಾರೆ. ಅವರ ಕಷ್ಟ ಕಾಲದಲ್ಲಿ ಅವರೊಂದಿಗೆ ನಿಲ್ಲುತ್ತಾರೆ. ನೈಸರ್ಗಿಕ ವಿಕೋಪಗಳಂತಹ ಸಂದರ್ಭದಲ್ಲಿ ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಾರೆ, ಇದಕ್ಕೂ ಮೇಲಾಗಿ 24/7 ನೆಲದ ಮೇಲೆ ಇರುತ್ತಾರೆ. ದೇಶದ ಯಾವ ನಾಯಕರು ಮಹಿಳೆಯರ ಕಲ್ಯಾಣ ಮತ್ತು ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಮಮತಾ ಬ್ಯಾನರ್ಜಿಯಷ್ಟು ಕೆಲಸ ಮಾಡಿಲ್ಲ ಎಂದರು.
ಬಂಗಾಳದ ಬಾಲಕಿಯರ ಕನ್ಯಾಶ್ರೀ ಕಾರ್ಯಕ್ರಮವನ್ನು ತೃಣಮೂಲ ಕಾಂಗ್ರೆಸ್‌ನ "ಜೀವಮಾನದ ಬದ್ಧತೆ" ಎಂದು ಅವರು ಕರೆದ ಘೋಷ್​, ಬಿಹಾರದಲ್ಲಿ ಎನ್‌ಡಿಎ ಭರವಸೆ ನೀಡಿದ ಮಹಿಳಾ ಕೇಂದ್ರಿತ ಯೋಜನೆಗಳನ್ನು ಮತಗಳನ್ನು ಗಳಿಸಲು ಮಹಿಳೆಯರಿಗೆ ನೀಡಿದ ಚುನಾವಣಾ ಪೂರ್ವ ಲಂಚ ಎಂದು ಟೀಕಿಸಿದರು.
ಬಂಗಾಳವು ತನ್ನ ತಾಳಕ್ಕೆ ತಕ್ಕಂತೆ ಕುಣಿಯಲು ನಿರಾಕರಿಸುತ್ತಿರುವುದರಿಂದ, ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಆಶಯವನ್ನು ಧಿಕ್ಕರಿಸಿ, ಬಂಗಾಳಕ್ಕೆ ನೀಡಬೇಕಾದ ನ್ಯಾಯಯುತ ಪಾಲನ್ನು ಹಂಚಿಕೆ ಮಾಡುತ್ತಿಲ್ಲ, ಸರ್ಕಾರವು ವಲಸೆ ಕಾರ್ಮಿಕರನ್ನು ಒಳನುಸುಳುಕೋರರು ಎಂಬ ಹಣೆಪಟ್ಟಿ ಕಟ್ಟುತ್ತಿದೆ,ಇದು ಬಿಜೆಪಿಯ ಒಡೆದು ಆಳುವ ಕೊಳಕು ರಾಜಕೀಯ ಎಂದರು.

ಬಂಗಾಳಿ ಭಾಷೆ ಎಂದರೆ ಬಿಜೆಪಿಗೆ ಆಗಲ್ಲ.........

ಬಿಜೆಪಿ ನಮ್ಮ ಭಾಷೆ, ಐಕಾನ್‌ಗಳು, ಸಂಸ್ಕೃತಿಯನ್ನು ಅವಹೇಳನ ಮಾಡುವ, ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ವಿಧಾನವನ್ನು ಬಂಗಾಳದ ಜನರು ಎಂದಿಗೂ ಮರೆಯುವುದಿಲ್ಲ. ನಾವು ವಿವೇಕಾನಂದರ ಮಕ್ಕಳು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಕ್ಕಳು, ರವೀಂದ್ರನಾಥ ಟ್ಯಾಗೋರ್ ಅವರ ಮಕ್ಕಳು. ನಾವು ನಿಮ್ಮೊಂದಿಗೆ ಹೋರಾಡುತ್ತೇವೆ ಮತ್ತು ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಹೇಳಿದ್ದೇನು.........?
ನಿನ್ನೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಬಳಿಕ ಸಂಜೆ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ, ಗಂಗಾ ನದಿ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತದೆ. ಬಿಹಾರದಲ್ಲಿನ ಗೆಲುವು, ನದಿಯಂತೆಯೇ, ಬಂಗಾಳದಲ್ಲಿ ನಮ್ಮ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದರು(ಏಜೆನ್ಸೀಸ್​).