TMC Leader Arrested | ಫರಿದ್‌ಪುರ ಬ್ಲಾಕ್ ಟಿಎಂಸಿ ಅಧ್ಯಕ್ಷ ಶತ್‌ದೀಪ್ ಘಟಕ್
ಕೊಲ್ಕತ್ತಾ: ವಂಚನೆ, ಬೆದರಿಕೆ ಮತ್ತು ಚುನಾವಣೋತ್ತರ ಹಿಂಸಾಚಾರದ ಗಂಭೀರ ಆರೋಪದ ಮೇಲೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರನ್ನು (TMC Leader Arrested) ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ದುರ್ಗಾಪುರ-ಫರಿದ್‌ಪುರ ಬ್ಲಾಕ್ ಟಿಎಂಸಿ ಅಧ್ಯಕ್ಷ ಶತ್‌ದೀಪ್ ಘಟಕ್ ಬಂಧಿತ ಆರೋಪಿಯಾಗಿದ್ದು, ವಿರೋಧ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಮತ್ತು ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಲು ಯತ್ನಿಸಿದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಪೊಲೀಸರು ಘಟಕ್ನನ್ನು ದುರ್ಗಾಪುರ ಉಪ-ವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ರಾಜಕೀಯ ಪಕ್ಷದ ಭೇದವಿಲ್ಲದೆ ಕಾನೂನು ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಇತ್ತೀಚೆಗೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ಜಿಲ್ಲೆಗಳಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಸುಲಿಗೆ ಮತ್ತು ಹಿಂಸಾಚಾರದ ಆರೋಪದಡಿ ಹಲವು ಟಿಎಂಸಿ ಪದಾಧಿಕಾರಿಗಳನ್ನು ಬಂಧಿಸಲಾಗಿದೆ. ಶತ್‌ದೀಪ್ ಘಟಕ್ ಬಂಧನವೂ ಇದೇ ಕಾರ್ಯಾಚರಣೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ರಾಜಕೀಯ ಪ್ರೇರಿತ ಆರೋಪ ಎಂದ ಘಟಕ್
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಶತ್‌ದೀಪ್ ಘಟಕ್, ಇವೆಲ್ಲವೂ ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರ ಮತ್ತು ಅಕ್ರಮಗಳ ಆರೋಪದ ಮೇಲೆ ತಮ್ಮನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ ಅವರು, 5 ವರ್ಷಗಲ ಹಿಂದೆ ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ದುರಂತ ಸಂಭವಿಸಿ ತೀವ್ರ ದುಃಖದಲ್ಲಿದ್ದಾಗಿ ಹೇಳಿದ್ದಾರೆ. ಇಷ್ಟು ವರ್ಷಗಳ ಬಳಿಕ ಈಗ ಹಠಾತ್ತನೆ ತಮ್ಮನ್ನು ಏಕೆ ಬಂಧಿಸಲಾಗಿದೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಕಾರ್ಯಾಚರಣೆಯ ಭಾಗವಾಗಿ ಭಾನುವಾರ ಹೂಗ್ಲಿಯಲ್ಲಿ ಮತ್ತೊಬ್ಬ ಟಿಎಂಸಿ ಮುಖಂಡರನ್ನು ಬಂಧಿಸಲಾಗಿದ್ದು, ಏಪ್ರಿಲ್ 26 ರಂದು ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೈದ್ಯಬಾಟಿ ಮುನ್ಸಿಪಾಲಿಟಿ ಕೌನ್ಸಿಲರ್ ರಾಜು ಪಾರುಯಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಸ್ನೇಹಾಂಶು ಮಹಾಂತ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದೆ(ಏಜೆನ್ಸೀಸ್).