ಗಿನ್ನೆಸ್ ವಿಶ್ವ ದಾಖಲೆ ಬರೆದ ಭಾರತ 
ದೇಶ

ಸಮುದ್ರದಾಳದಲ್ಲಿ ಅರಳಿದ ತ್ರಿವರ್ಣ ಧ್ವಜ! ಅಂಡಮಾನ್‌ನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಭಾರತ...Guinness World Record

ಪ್ರಮುಖ ಮುಖ್ಯಾಂಶಗಳು

  • ಗಿನ್ನೆಸ್ ವಿಶ್ವ ದಾಖಲೆ ಬರೆದ ಭಾರತ
  • ಸಮುದ್ರದಾಳದಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ ಹಾರಿಸುವ ಮೂಲಕ ಸಾಧನೆ
ಅಂಡಮಾನ್: ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಈಗ ಕೇವಲ ನೆಲ ಮತ್ತು ಆಕಾಶದಲ್ಲಿ ಮಾತ್ರವಲ್ಲ, ಅಟ್ಲಾಂಟಿಕ್‌ನ ಸುಂದರ ಅಲೆಗಳ ಕೆಳಗೂ ವಿಜೃಂಭಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಧಾನಗರ್ ಬೀಚ್‌ನಲ್ಲಿ ಶನಿವಾರ (ಮೇ.2) ವಿಶ್ವದ ಅತಿದೊಡ್ಡ ನೀರೊಳಗಿನ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತ ಗಿನ್ನೆಸ್ ವಿಶ್ವ ದಾಖಲೆ (Guinness World Record) ಬರೆದಿದೆ

ಏನಿದರ ವಿಶೇಷ?

ಸ್ವರಾಜ್ ದ್ವೀಪ (ಹ್ಯಾವ್ಲಾಕ್) ದ ಕಡು ನೀಲಿ ಸಮುದ್ರದ ಅಡಿಯಲ್ಲಿ ಸುಮಾರು 60 ಮೀಟರ್ ಉದ್ದ ಮತ್ತು 40 ಮೀಟರ್ ಅಗಲದ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಯಿತು. ಈ ಬೃಹತ್ ಕಾರ್ಯಾಚರಣೆಯು ಎಷ್ಟು ಸಂಕೀರ್ಣವಾಗಿತ್ತೆಂದರೆ, ಇದನ್ನು ಯಶಸ್ವಿಗೊಳಿಸಲು ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಅಂಡಮಾನ್ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು ಕೈಜೋಡಿಸಿದ್ದರು.
ಹದಿನಾರರ ಹರೆಯದ ಸ್ಕೂಬಾ ಡೈವರ್‌ಗಳ ಅಟ್ಟಹಾಸ!
ಈ ಇಡೀ ಕಾರ್ಯಕ್ರಮದ ಹೈಲೈಟ್ ಅಂದರೆ ಅಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಡೈವರ್‌ಗಳಲ್ಲಿ ಮೂವರು ಹದಿಹರೆಯದ ಮಕ್ಕಳು ಸಖತ್ ಮಿಂಚಿದ್ದಾರೆ. 16 ವರ್ಷದ ಫತೇಹ್ ಜಹಾನ್ ಸಿಂಗ್, 15 ವರ್ಷದ ಲಾವಣ್ಯ ಐರಾ ಮತ್ತು 14 ವರ್ಷದ ರಣವಿಜಯ್ ಸಿಂಗ್ ಎಂಬ ಈ ಪುಟಾಣಿ ಸಾಹಸಿಗಳು ಸಮುದ್ರದಾಳಕ್ಕೆ ಇಳಿದು ಧ್ವಜ ಹಿಡಿದು ಸಂಭ್ರಮಿಸಿದರು.
ಬೆಂಗಳೂರಿನ ರಿಷಿ ವ್ಯಾಲಿ ಶಾಲೆಯ ವಿದ್ಯಾರ್ಥಿನಿ ಲಾವಣ್ಯ ಮತ್ತು ದೆಹಲಿಯ ರಣವಿಜಯ್ ಈ ಬಗ್ಗೆ ಮಾತನಾಡುತ್ತಾ, ಸಮುದ್ರದ ಅಡಿಯಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಿಡಿದಿಟ್ಟುಕೊಳ್ಳುವಾಗ ಮೈ ಜುಂ ಎಂದಿತು, ಆ ಕ್ಷಣದ ಭಾವನೆಯನ್ನು ವರ್ಣಿಸಲು ಪದಗಳೇ ಸಾಲದು ಎಂದು ಹೇಳಿದರು.

ಅಧಿಕೃತ ಮುದ್ರೆ ಒತ್ತಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್

ಬೆಳಿಗ್ಗೆ 10.35ಕ್ಕೆ ಸರಿಯಾಗಿ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರಾದ ರಿಷಿ ನಾಥ್ ಅವರು ಈ ಸಾಧನೆಯನ್ನು ಪರಿಶೀಲಿಸಿ, ಅಧಿಕೃತವಾಗಿ ಘೋಷಿಸಿದರು. ಅಂಡಮಾನ್‌ನ ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಗೆ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಈ ಮೂಲಕ ಭಾರತದ ಸಾಹಸ ಪ್ರವಾಸೋದ್ಯಮ ಮತ್ತು ಸಮುದ್ರ ಚಟುವಟಿಕೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.

ನಾಳೆಯೂ ನಡೆಯಲಿದೆ ಮತ್ತೊಂದು ದಾಖಲೆಯ ಪ್ರಯತ್ನ!

ಭಾರತದ ಈ ದಾಖಲೆಗಳ ಸರಣಿ ಇಲ್ಲಿಗೇ ನಿಂತಿಲ್ಲ. ರವಿವಾರ (ಮೇ. 3) ದಂದು ಇದೇ ಸ್ವರಾಜ್ ದ್ವೀಪದ ಲೈಟ್‌ಹೌಸ್ ಡೈವ್ ಸೈಟ್‌ನಲ್ಲಿ ಅತಿ ಎತ್ತರದ ಮಾನವ ರಾಶಿ (Tallest Human Pyramid) ನಿರ್ಮಿಸಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಈ ಮೂಲಕ ಮತ್ತೊಂದು ಗಿನ್ನೆಸ್ ದಾಖಲೆಯನ್ನು ತನ್ನ ಮುಡಿಗೇರಿಸಿಕೊಳ್ಳಲು ಅಂಡಮಾನ್ ಸಜ್ಜಾಗಿದೆ,(ಏಜನ್ಸೀಸ್​).