ಚೆನ್ನೈ: ದೇಶದ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ(ಎಲ್‌ಟಿಟಿಇ) ಸಂಸ್ಥಾಪಕ ವೇಲುಪಿಳ್ಲೈ ಪ್ರಭಾಕರನ್ ಅವರ ಪುಣ್ಯತಿಥಿಯಂದು ಅವರಿಗೆ ಪರೋಕ್ಷವಾಗಿ ಗೌರವ ಸಲ್ಲಿಸುವ ತಮಿಳುನಾಡಿನ ಸಿಎಂ ವಿಜಯ್(CM Vijay) ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸೋಮವಾರ ಶ್ರೀಲಂಕಾದ ಮುಲ್ಲಿವೈಕ್ಕಲ್ ಘಟನೆ ಸ್ಮರಣೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮುಲ್ಲಿವೈಕ್ಕಲ್ನಲ್ಲಿ ಶ್ರೀಲಂಕಾ ಸೇನೆಯು 2009 ಮೇ 18ರಂದು ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಮತ್ತು ಅವರ ಮಗ ಮತ್ತು ಕಮಾಂಡರ್ ಚಾರ್ಲ್ಸ್ ಆಂಥೋನಿ ಸೇರಿದಂತೆ ಅವರ ಲೆಫ್ಟಿನೆಂಟ್‌ಗಳನ್ನು ಕೊಲ್ಲುವ ಮೂಲಕ ಅಂತರ್ಯುದ್ಧದ ಅಂತ್ಯವನ್ನು ಘೋಷಿಸಿತ್ತು.
ಎಲ್‌ಟಿಟಿಇ ವಿರುದ್ಧದ ಅಂತಿಮ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ತಮಿಳು ನಾಗರಿಕರನ್ನು ಗೌರವಿಸಲು ಮೇ 18ಅನ್ನು ಜಾಗತಿಕ ಶ್ರೀಲಂಕಾದ ತಮಿಳರು ಮತ್ತು ಭಾರತದ ತಮಿಳುನಾಡಿನ ಕೆಲವು ಭಾಗಗಳು ಮುಲ್ಲಿವೈಕ್ಕಲ್ ಸ್ಮರಣಾರ್ಥ ದಿನವೆಂದು ಆಚರಿಸಿಕೊಳ್ತಾರೆ. ವಿಜಯ್ ಆರಂಭದಿಂದಲೂ ಇಳಂ ತಮಿಳರ ಪರ ಧ್ವನಿ ಎತ್ತುತ್ತಾ ಬಂದಿದ್ದಾರೆ.
ವಿಜಯ್ ಹೇಳಿದ್ದೇನು?
ಮುಲ್ಲಿಕ್ಕೈವಲ್ ದಿನವನ್ನು ನೆನಪಿಸಿಕೊಂಡು ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ವಿಜಯ್, ಮುಳ್ಳಿವೈಕ್ಕಲ್‌ನ ನೆನಪುಗಳನ್ನು ನಾವು ನಮ್ಮ ಹೃದಯದಲ್ಲಿ ಹೊತ್ತುಕೊಳ್ಳುತ್ತೇವೆ! ಸಮುದ್ರದಾಚೆ ವಾಸಿಸುವ ನಮ್ಮ ತಮಿಳು ಬಂಧುಗಳ ಹಕ್ಕುಗಳಿಗಾಗಿ ನಾವು ಯಾವಾಗಲೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ! ಎಂದು ಹೇಳಿದ್ದಾರೆ.
ವಿವಾದವಾಗಲು ಕಾರಣವೇನು?
ಶ್ರೀಲಂಕಾದಲ್ಲಿ ತಮಿಳು ಈಳಂ ಎಂಬ ಸ್ವತಂತ್ರ ತಮಿಳು ದೇಶವನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಪ್ರಭಾಕರನ್ ಸ್ಥಾಪಿಸಿದ ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ಭಾರತದಲ್ಲಿ ವಿವಾದಾತ್ಮಕ ಇತಿಹಾಸವನ್ನು ಹೊಂದಿದೆ.
1991ರಲ್ಲಿ ಪೆರಂಬೂದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಎಲ್‌ಟಿಟಿಇ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಭಾರತದಲ್ಲಿಯೂ ಎಲ್‌ಟಿಟಿಇಯನ್ನು ನಿಷೇಧಿಸಲಾಗಿದೆ. ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾದ ಆತ್ಮಹತ್ಯಾ ಬಾಂಬ್ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಪ್ರಭಾಕರನ್ ಕೂಡ ಒಬ್ಬರು ಎಂದು ಭಾರತೀಯ ತನಿಖಾಧಿಕಾರಿಗಳು ಹೆಸರಿಸಿದ್ದಾರೆ.
ಈಗ ಅದೇ ವ್ಯಕ್ತಿಯನ್ನು ಸ್ಮರಿಸುವ ಮೂಲಕ ಸಿಎಂ ವಿಜಯ್ ದೇಶ ಮತ್ತು ಕಾಂಗ್ರೆಸ್ ನಾಯಕರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಚುನಾವಣೆಯಲ್ಲಿ ಟಿವಿಕೆಗೆ ಬಹುಮತ ಬರದಿದ್ರೂ ಅವರಿಗೆ ಕಾಂಗ್ರೆಸ್ ಸರ್ಕಾರ ರಚಿಸಲು ಬೆಂಬಲ ನೀಡಿದೆ. ಆದರೂ ವಿಜಯ್ ಸ್ಮರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚುನಾವಣೆಗೂ ಮುನ್ನವೂ ಪ್ರಭಾಕರನ್ಗೆ ಬೆಂಬಲ
ಚುನಾವಣೆಗೂ ಮುನ್ನವೂ ಸೆಪ್ಟೆಂಬರ್ 2025ರಲ್ಲಿ ನಾಗಪಟ್ಟಣಂ ಜಿಲ್ಲೆಯಲ್ಲಿ ಮಾತನಾಡಿದ್ದ ವಿಜಯ್, ನಮ್ಮ ಹೊಕ್ಕುಳಬಳ್ಳಿಯ ಬಂಧುಗಳಾದ ಈಳಂ ತಮಿಳರು, ಅವರು ಶ್ರೀಲಂಕಾದಲ್ಲಿರಲಿ ಅಥವಾ ಪ್ರಪಂಚದಾದ್ಯಂತ ಎಲ್ಲೇ ಇದ್ದರೂ ಮಾತೃತ್ವವನ್ನು ತೋರಿಸಿದ ನಾಯಕನನ್ನು ಕಳೆದುಕೊಂಡ ಬಳಿಕ ಒಂಟಿಯಾಗಿದ್ದು, ಅವರ ಪರವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಪ್ರಭಾಕರನ್ ಉಲ್ಲೇಖಿಸಿ ಮಾತನಾಡಿದ್ದರು (ಏಜೆನ್ಸೀಸ್).