ಸಾರಿಗೆ ಇಲಾಖೆ ಅಧಿಕಾರಿ ಮೂದ್ ಕಿಶಾನ್
- ಎಸಿಬಿ ದಾಳಿಗೆ ಒಳಗಾದ ತೆಲಂಗಾಣ ಸಾರಿಗೆ ಅಧಿಕಾರಿಯನ್ನು ಮೂದ್ ಕಿಶನ್
- ಬರೋಬ್ಬರಿ 12.72 ಕೋಟಿ ರೂ. ಮೌಲ್ಯದ ಆಸ್ತಿ ಅಧಿಕಾರಿಗಳಿಂದ ಸೀಜ್
- ಆಸ್ತಿಯು ಆದಾಯದ ಮೂಲ ಮೀರಿರುವುದರಿಂದ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಕಿಶನ್
ಹೈದರಾಬಾದ್: ಸಾರಿಗೆ ಇಲಾಖೆ ಅಧಿಕಾರಿಯ ( Transport Officer ) ಆಸ್ತಿಯನ್ನು ನೋಡಿ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಅಧಿಕಾರಿಗಳೇ ದಂಗಾಗಿದ್ದಾರೆ. ಹಾಗಾದರೆ, ಆ ಸಾರಿಗೆ ಅಧಿಕಾರಿಯ ಬಳಿ ಎಷ್ಟು ಆಸ್ತಿ ಇದೆ? ಅಷ್ಟೊಂದು ಹಣವನ್ನು ಯಾವ ಮೂಲಗಳಿಂದ ಆ ಅಧಿಕಾರಿ ಪಡೆದರು? ಎಸಿಬಿ ಅಧಿಕಾರಿಗಳ ದಾಳಿಯ ವೇಳೆ ಸಿಕ್ಕಿದ್ದೇನು? ಎಂಬ ಮಾಹಿತಿ ಇಲ್ಲಿದೆ.
ಎಸಿಬಿ ದಾಳಿಗೆ ಒಳಗಾದ ತೆಲಂಗಾಣ ಸಾರಿಗೆ ಅಧಿಕಾರಿಯನ್ನು ಮೂದ್ ಕಿಶನ್ ಎಂದು ಗುರುತಿಸಲಾಗಿದೆ. ಇವರಿಗೆ ಸಂಬಂಧಿಸಿದ ಬರೋಬ್ಬರಿ 12.72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಆದರೆ, ಅವರ ಬಳಿ ಇರುವ ಆಸ್ತಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 62 ಕೋಟಿ ರೂ. ಎಂದು ಹೇಳಲಾಗಿದೆ. ಇಷ್ಟೊಂದು ಹಣ ಪತ್ತೆಯಾದ ಬೆನ್ನಲ್ಲೇ ಮೂದ್ ಕಿಶಾನ್ ಅವರ ಸಂಬಳ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಹೆಚ್ಚಿದೆ. ತನಿಖಾಧಿಕಾರಿಗಳ ಪ್ರಕಾರ, ಮೂದ್ ಕಿಶಾನ್ ಶ್ರೇಣಿಯ ಅಧಿಕಾರಿಗಳ ಒಂದು ತಿಂಗಳ ಸಂಬಳ 1 ರಿಂದ 1.25 ಲಕ್ಷ ರೂ. ಇದೆ. ಅವರ ಆಸ್ತಿಯು ಆದಾಯದ ಮೂಲವನ್ನು ಮೀರಿರುವುದರಿಂದ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಿಶನ್ ಅವರ ನಿವಾಸ ಮತ್ತು ಅವರ ಸಹಚರರಿಗೆ ಸೇರಿದ ಇತರ 11 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ತಿಳಿದುಬಂದ ಮತ್ತೊಂದು ಶಾಕಿಂಗ್ ಸಂಗತಿ ಏನೆಂದರೆ, ಕಿಶಾನ್ ಅವರ ಐಷಾರಾಮಿ ಜೀವನ ಮತ್ತು ಹೂಡಿಕೆಯಂತಹ ವಿವಿಧ ಬಂಡವಾಳಗಳು ಪತ್ತೆಯಾಗಿವೆ. ಲಹರಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಶೇ. 50 ರಷ್ಟು ಪಾಲು ಮತ್ತು ನಿಜಾಮಾಬಾದ್‌ನಲ್ಲಿ 3,000 ಚದರ ಗಜಗಳ ಪ್ರೀಮಿಯಂ ಪೀಠೋಪಕರಣಗಳ ಶೋರೂಂ ಕೂಡ ಕಿಶನ್ ಹೆಸರಿನಲ್ಲಿವೆ.
ಕಿಶನ್ ಆಸ್ತಿ ಡೀಟೇಲ್ಸ್ ಇಲ್ಲಿಗೆ ನಿಲ್ಲುವುದಿಲ್ಲ. ಸಂಗಾರೆಡ್ಡಿ ಜಿಲ್ಲೆಯಲ್ಲಿ 31 ಎಕರೆ ಕೃಷಿ ಭೂಮಿ ಮತ್ತು ನಿಜಾಮಾಬಾದ್ ಪುರಸಭೆಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 10 ಎಕರೆ ವಾಣಿಜ್ಯ ಭೂಮಿಯನ್ನು ವಿಶಾಲವಾದ ಭೂ ಹಿಡುವಳಿಗಳಲ್ಲಿ ಸೇರಿಸಲಾಗಿದೆ. ಲಿಕ್ವಿಡ್ ಅಸೆಟ್ಸ್ ಮತ್ತು ವಾಹನಗಳು ಸಹ ಪತ್ತೆಯಾಗಿವೆ. ಪ್ರಸ್ತುತ ಸ್ಥಗಿತಗೊಳಿಸಿರುವ ಬ್ಯಾಂಕ್ ಖಾತೆಯಲ್ಲಿ 1.37 ಕೋಟಿ ರೂ.ಗಳ ಹಣವಿದೆ. ಸುಮಾರು 1 ಕೆಜಿಗೂ ಹೆಚ್ಚು ಚಿನ್ನದ ಆಭರಣಗಳು ಮತ್ತು ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಸೇರಿದಂತೆ ಐಷಾರಾಮಿ ವಾಹನಗಳು ಪತ್ತೆಯಾಗಿವೆ. ವಸತಿ ಆಸ್ತಿ ವಿಚಾರಕ್ಕೆ ಬಂದರೆ, ನಿಜಾಮಾಬಾದ್‌ನ ಅಶೋಕ ಟೌನ್‌ಶಿಪ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಮತ್ತು ಸಂಗಾರೆಡ್ಡಿಯಲ್ಲಿ ವಿಶೇಷ ಪಾಲಿಹೌಸ್ ಸೌಲಭ್ಯವನ್ನು ಕಿಶನ್ ಹೊಂದಿದ್ದಾರೆಂದು ತಿಳಿದಬಂದಿದೆ.
ಇನ್ನು ಸೇವೆಯಲ್ಲಿರುವಾಗಲೇ ಹೋಟೆಲ್‌ಗಳು ಮತ್ತು ಶೋರೂಂಗಳನ್ನು ಆರಂಭಿಸಿರುವುದು ಭ್ರಷ್ಟಾಚಾರ ತಡೆ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಸದ್ಯ ಕಿಶನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಬಿ) ಮತ್ತು 13(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅಕ್ರಮವಾಗಿ ಶ್ರೀಮಂತರಾಗುವುದು ಮತ್ತು ಕ್ರಿಮಿನಲ್ ದುಷ್ಕೃತ್ಯಕ್ಕೆ ಸಂಬಂಧಿಸಿವೆ, (ಏಜೆನ್ಸೀಸ್).