ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಹಾಗೂ ಕೆಕೆಆರ್​ ಮಾಲೀಕ ಶಾರುಖ್​ ಖಾನ್  
ದೇಶ

ಬಾಂಗ್ಲಾ ಆಟಗಾರನನ್ನು ಖರೀದಿಸಿದ ಶಾರುಖ್​ ಓರ್ವ ದೇಶದ್ರೋಹಿ: ಕೆಕೆಆರ್ ಓನರ್​​ ವಿರುದ್ಧ ವಾಗ್ದಾಳಿ! Shah Rukh Khan

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದಲ್ಲಿ ಭಾರತ ವಿರೋಧಿ ಚುಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ
  • ಹಿಂದುಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾದೇಶದಲ್ಲಿ ಹತ್ಯೆಗಳು ನಡೆಯುತ್ತಿವೆ
  • ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿಸಿರುವ ನಟ ಶಾರುಖ್​ ಖಾನ್ ವಿರುದ್ಧ ಆಕ್ರೋಶ
ಲಖನೌ: ಕಳೆದೊಂದು ವರ್ಷದಿಂದ ಬಾಂಗ್ಲಾದೇಶದಲ್ಲಿ ಹಿಂದುಗಳು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಿರಂತರವಾಗಿ ದಾಳಿಗಳಾಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹಿಂದುಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಇದರಿಂದ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧಕ್ಕೆ ಭಾರಿ ಬಿಕ್ಕಟ್ಟು ಉಂಟಾಗಿದೆ. ಬಾಂಗ್ಲಾದಲ್ಲಿ ಭಾರತ ವಿರೋಧಿ ಚುಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿರುವ ಈ ಸಮಯದಲ್ಲಿ ಬಾಂಗ್ಲಾ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಮಾಲೀಕ ಹಾಗೂ ನಟ ಶಾರುಖ್​ ಖಾನ್ ( Shah Rukh Khan )​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಡಿಸೆಂಬರ್​ 16ರಂದು ದುಬೈನಲ್ಲಿ ನಡೆದ ಐಪಿಎಲ್​ ಮಿನಿ ಹರಾಜಿನಲ್ಲಿ ಕೆಕೆಆರ್​ ಫ್ರಾಂಚೈಸಿ ಖರೀದಿ ಮಾಡಿದೆ. ಇದನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿರುವ ಉತ್ತರ ಪ್ರದೇಶದ ವಿಧಾನಸಭೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಸಂಗೀತ್​ ಸೋಮ್​, ಶಾರುಖ್​ ಖಾನ್​ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.
ಒಂದು ಕಡೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ, ಮತ್ತೊಂದೆಡೆ ಐಪಿಎಲ್‌ನಲ್ಲಿ ಬಾಂಗ್ಲಾ ಕ್ರಿಕೆಟಿಗರನ್ನು ಖರೀದಿಸಲಾಗುತ್ತಿದೆ. ದೇಶದ್ರೋಹಿ ಶಾರುಖ್ ಖಾನ್, ಬಾಂಗ್ಲಾದೇಶದ ಕ್ರಿಕೆಟಿಗ ರೆಹಮಾನ್ ಅವರನ್ನು 9 ಕೋಟಿ ರೂ.ಗೆ ಖರೀದಿಸಿದ್ದಾರೆ. ಅಂತಹ ದೇಶದ್ರೋಹಿಗಳಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಮೀರತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೋಮ್ ಅವರು ವಾಗ್ದಾಳಿ ನಡೆಸಿದರು. 
ನೀವು ಇಂದು ಗಳಿಸಿರುವ ಸ್ಥಾನಮಾನಕ್ಕೆ ಕಾರಣ ನಮ್ಮ ಭಾರತದ ಜನರು. ನಿಮ್ಮನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದಾರೆ. ಅದೇ ಖ್ಯಾತಿಯಲ್ಲಿ ನೀವು ಹಣವನ್ನು ಸಹ ಪಡೆಯುತ್ತಿದ್ದೀರಿ ಆದರೆ, ಅದೇ ದೇಶಕ್ಕೆ ನೀವು ದ್ರೋಹ ಬಗೆದಿದ್ದೀರಿ ಎಂದಿರುವ ಸೋಮ್​, ರೆಹಮಾನ್‌ರಂತಹ ಬಾಂಗ್ಲಾ ಆಟಗಾರರು ಭಾರತಕ್ಕೆ ಬಂದಲ್ಲಿ, ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. 
ರೆಹಮಾನ್​ ಅವರನ್ನು ಖರೀದಿ ಮಾಡಿದ್ದಕ್ಕೆ ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಕೂಡ ಶಾರುಖ್​ ಖಾನ್​ ಅವರನ್ನು ಟೀಕಿಸಿದ್ದಾರೆ. ಅಲ್ಲದೆ, ಬಾಂಗ್ಲಾ ಆಟಗಾರನನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳದಂತೆ ಕೆಕೆಆರ್​ ಆಡಳಿತ ಮಂಡಳಿಗೆ ಠಾಕೂರ್​ ಅವರು ಸಲಹೆಯನ್ನು ನೀಡಿದ್ದಾರೆ. 
ಕೆಕೆಆರ್ ತಂಡದ ಮಾಲೀಕರನ್ನು ಸ್ಟಾರ್ ಆಗಿ ಮಾಡಿದ್ದೇ ನಮ್ಮ ಸನಾತನ ಭಕ್ತರು ಮತ್ತು ಹಿಂದೂಗಳು. ಪ್ರಸ್ತುತ ಬಾಂಗ್ಲಾದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಮತ್ತು ಜೀವಂತವಾಗಿ ಸುಡಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಅಮಾಯಕ ಹುಡುಗಿಯರ ಮೇಲೆ ಹಲ್ಲೆ ನಡೆಯುತ್ತಿದೆ. ಹೀಗಾಗಿ, ಆ ದೇಶದ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬಾರದು. ಇದು ನನ್ನಬ್ಬೊಬ್ಬನ ಕೂಗಲ್ಲ, ಇಡೀ ಭಾರತೀಯರ ಆಗ್ರಹ ಎಂದು ಠಾಕೂರ್​ ಅವರು ತಿಳಿಸಿದ್ದಾರೆ. 
ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್​ ನಾಯಕ ಸುರೇಂದರ್ ರಜಪೂತ್,  ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು, ಅದೊಂದು "ದೇಶದ್ರೋಹಿ" ಪಕ್ಷ ಎಂದು ಟೀಕಿಸಿದರು. ಅಲ್ಲದೆ, ಶಾರುಖ್ ಅವರು ಮುಸ್ಲಿಂ ಎಂಬ ಕಾರಣಕ್ಕೆ ಅವರು ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಸುರೇಂದರ್ ಅವರು ಎನ್​ಡಿಟಿವಿಗೆ ತಿಳಿಸಿದ್ದಾರೆ.​
ಅಂದಹಾಗೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆಯೇ ಈ ಮಾತಿನ ಸಮರ ನಡೆಯುತ್ತಿದೆ, (ಏಜೆನ್ಸೀಸ್​).