- ಟಿಕೆಟ್ ಬುಕಿಂಗ್ ವಂಚನೆ ತಡೆಗಟ್ಟಲು ಭಾರತೀಯ ರೈಲ್ವೆಯಿಂದ ಮಹತ್ವದ ಕ್ರಮ
- ಬರೋಬ್ಬರಿ 3.02 ಕೋಟಿ ಅನುಮಾನಾಸ್ಪದ ಲಾಗಿನ್ ಐಡಿ ರದ್ದು
- ನಕಲಿ ಬಳಕೆದಾರರನ್ನು ತಡೆಗಟ್ಟಲು ರೈಲ್ವೆ ಇಲಾಖೆಯಿಂದ ಆ್ಯಂಟಿ-ಬಾಟ್ ಸೇವೆ ನಿಯೋಜನೆ
ನವದೆಹಲಿ: ಟಿಕೆಟ್ ರಿಸರ್ವೇಶನ್ ವಂಚನೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೆಯು ( Indian Railways ) ಬರೋಬ್ಬರಿ 3.02 ಕೋಟಿ ಅನುಮಾನಾಸ್ಪದ ಲಾಗಿನ್ ಐಡಿಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಹಾಗೂ ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ತುರ್ತು ಸಂದರ್ಭಗಳಲ್ಲಿನ ಪ್ರಯಾಣ ಸೇರಿದಂತೆ ರೈಲ್ವೆಯ ತತ್ಕಾಲ್ ಬುಕಿಂಗ್ ಸೇವೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಅಂದಹಾಗೆ, ಪ್ರಯಾಣದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ತತ್ಕಾಲ್ ಬುಕಿಂಗ್ ಸೇವೆ ಲಭ್ಯವಾಗುತ್ತದೆ. ಈ ಸಮಯದಲ್ಲಿ, ವಂಚಕರು ಸ್ವಯಂಚಾಲಿತ ಬಾಟ್‌ಗಳು ಮತ್ತು ಸಾಫ್ಟ್‌ವೇರ್ ಪ್ರೋಗ್ರಮ್ಗಳ ಸಹಾಯದಿಂದ ನಕಲಿ ಪ್ರೊಫೈಲ್ಗಳನ್ನು ಕ್ರಿಯೆಟ್ ಮಾಡಿ, ದೊಡ್ಡ ಪ್ರಮಾಣದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಪಡೆದುಕೊಳ್ಳುತ್ತಾರೆ. ನಂತರ ಅವುಗಳನ್ನು ಹೆಚ್ಚಿನ ಬೆಲೆಗೆ ಅಗತ್ಯವಿರುವವರಿಗೆ ಮರುಮಾರಾಟ ಮಾಡುತ್ತಾರೆ. ಇದನ್ನು ತಡೆಗಟ್ಟಲು ಈ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಣೆ ನೀಡಿದರು.
ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, 2025 ಜನವರಿ ತಿಂಗಳಿಂದ ಇಲ್ಲಿಯವರೆಗೆ 3.02 ಕೋಟಿ ಅನುಮಾನಾಸ್ಪದ ಯೂಸರ್ ಐಡಿಗಳನ್ನು ರದ್ದುಪಡಿಸಲಾಗಿದೆ ಎಂದರು.
ನಕಲಿ ಬಳಕೆದಾರರನ್ನು ತಡೆಗಟ್ಟಲು ರೈಲ್ವೆ ಇಲಾಖೆಯು ಆ್ಯಂಟಿ-ಬಾಟ್ ಸೇವೆಯನ್ನು ನಿಯೋಜಿಸಿದೆ. ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಸಂಖ್ಯೆ ಪರಿಶೀಲನೆಯ ಮೂಲಕ ಒಟಿಪಿ ಪರಿಶೀಲನೆಯನ್ನೂ ಕಡ್ಡಾಯಗೊಳಿಸಿದೆ ಎಂದು ರೈಲ್ವೆ ಸಚಿವರು ಸಂಸತ್ತಿನಲ್ಲಿ ತಿಳಿಸಿದರು.
ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ವಂಚನೆಯನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈಲ್ವೆಗಳು ನೆಟ್‌ವರ್ಕ್ ಫೈರ್‌ವಾಲ್‌ಗಳು, ಇಂಟ್ರುಷನ್ ಪ್ರಿವೆನ್ಸನ್ ಸಿಸ್ಟಮ್ ಹಾಗೂ ವೆಬ್ ಅಪ್ಲಿಕೇಶನ್‌ಗಳು ಸೇರಿದಂತೆ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಸಿದ್ಧಪಡಿಸಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅನುಮಾನಾಸ್ಪದವಾಗಿ ಬುಕ್ ಮಾಡಿದವರ ಪಿಎನ್‌ಆರ್ ಸಂಖ್ಯೆಯನ್ನು ಬಳಸಿಕೊಂಡು ಸೈಬರ್ ಅಪರಾಧ ವಿಭಾಗಕ್ಕೆ ದೂರು ದಾಖಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ರೈಲ್ವೆ ಸಚಿವರು ಹೇಳಿದರು.