ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದಿವ್ಯಾಗರ್ ಕಡಲತೀರದಲ್ಲಿ ದುರಂತವೊಂದು ಸಂಭವಿಸಿದ್ದು, ಗುರುವಾರ(ಅ. 01) ಪಿಕ್ನಿಕ್‌ಗೆ ತೆರಳಿದ್ದ ಎಂಟು ಹದಿಹರೆಯದ ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿದ್ದು, ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿಗಳು ಪುಣೆ ಜಿಲ್ಲೆಯ ಅಲಂದಿಯಲ್ಲಿರುವ 'ವಿನ್ನರ್ಸ್ ಅಕಾಡೆಮಿ' ಎಂಬ ಖಾಸಗಿ ತರಬೇತಿ ಕೇಂದ್ರದವರು. 25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಮಂದಿಯ ಗುಂಪು ಸಂಜೆ 5:30ರ ಸುಮಾರಿಗೆ ಕಡಲತೀರಕ್ಕೆ ಪಿಕ್ನಿಕ್‌ಗೆ ಆಗಮಿಸಿತ್ತು ಎಂದು ತಿಳಿದು ಬಂದಿದೆ.
ಎಂಟು ವಿದ್ಯಾರ್ಥಿಗಳು ಸಮುದ್ರಕ್ಕಿಳಿದಿದ್ದು, ನೀರಿನ ಆಳ ಮತ್ತು ಪ್ರವಾಹದ ವೇಗವನ್ನು ಸರಿಯಾಗಿ ಅಂದಾಜಿಸಲು ವಿಫಲರಾದ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಶೋಧ ಮತ್ತು ರಕ್ಷಣಾ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಮೃತರನ್ನು ತನ್ಮಯ್ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೇ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಸಂಕರ್, ರಾಜ್‌ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಂ ಭಂಡವಾಳ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ಎಲ್ಲಾ ಎಂಟು ವಿದ್ಯಾರ್ಥಿಗಳು 16 ವರ್ಷ ವಯಸ್ಸಿನವರಾಗಿದ್ದು, ಪುಣೆಯ ಆಳಂದಿ ನಿವಾಸಿಗಳಾಗಿದ್ದಾರೆ.
ದಿವ್ಯಾಗರ್ ಬೀಚ್ ಅಲಂದಿಯಿಂದ ಸುಮಾರು 170 ಕಿ.ಮೀ ಮತ್ತು ರಾಜ್ಯ ರಾಜಧಾನಿ ಮುಂಬೈನಿಂದಲೂ ಅಷ್ಟೇ ದೂರದಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).