ನವದೆಹಲಿ: ವ್ಯಾಪಾರಿಗಳು ಎತ್ತಿದ ಕಳವಳಗಳನ್ನು ಅನುಸರಿಸಿ ನ. 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರದ ಬಗ್ಗೆ ಮಿತ್ರಪಕ್ಷಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾನುವಾರ(ಅ. 25) ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್ 1 ರಂದು ರಾಮಲೀಲಾ ಮೈದಾನದಲ್ಲಿ ಮೆಗಾ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ಕೆಲವು ವ್ಯಾಪಾರಿಗಳು ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ. ನಾಳೆ ಮುಂದಿನ ಕ್ರಮಗಳ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾವು ನಮ್ಮ ಪಕ್ಷ ಮತ್ತು ನಮ್ಮ ಇತರ ಮೈತ್ರಿ ಪಾಲುದಾರರೊಂದಿಗೆ ಸಮಾಲೋಚಿಸುತ್ತೇವೆ ಎಂದಿದ್ದಾರೆ.
ಇದು ಮತ ಕಳ್ಳತನದಂತಹ ದೊಡ್ಡ ವಿಷಯ. ಅವರಿಗೆ ಮತದಾನದ ಹಕ್ಕು ಇಲ್ಲದಿದ್ದರೆ, ಯಾವುದೇ ವ್ಯಾಪಾರಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಇಂದು, ಯಾವುದೇ ವಿದ್ಯಾರ್ಥಿ ತಮ್ಮ ಭವಿಷ್ಯವನ್ನು ನಿರ್ಮಿಸಲು ಬಯಸಿದರೆ, ಅವರಿಗೆ ಯಾವುದೇ ಬೆಂಬಲವೂ ಸಿಗುವುದಿಲ್ಲ. ಆದರೂ, ನಮಗೆ ಬಂದಿರುವ ವಿನಂತಿಯ ಬಗ್ಗೆ ನಾವು ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಬ್ಲಾಕ್ ವತಿಯಿಂದ ನ. 01ರಂದು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಆದರೆ ಈ ಪ್ರತಿಭಟನೆಯಿಂದ ತಮ್ಮ ವ್ಯಾಪಾರಕ್ಕೆ ಭಾರಿ ನಷ್ಟವಾಗಲಿದೆ ಎಂದು ದೆಹಲಿ ವ್ಯಾಪಾರಿಗಳ ಸಂಘ ಅಲವತ್ತುಕೊಂಡಿದೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು, ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ರ‍್ಯಾಲಿಯನ್ನು ಮುಂದೂಡಬೇಕೆಂದು ವಿನಂತಿಸಿದ್ದಾರೆ. ಪ್ರತಿಭಟನೆ ನಡೆದರೇ ಸುಮಾರು 10,000 ಕೋಟಿ ರೂ.ಗಳವರೆಗೆ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ಮತ್ತು ಧಂತೇರಸ್ ಸಮಯದಲ್ಲಿ ಈ ಪ್ರದೇಶದಲ್ಲಿ 25,000 ಕೋಟಿ ರೂ.ಗಳ ವ್ಯವಹಾರ ನಡೆಯಲಿದೆ. ಪ್ರತಿಭಟನಾ ದಿನದಂದು ಎಲ್ಲಾ ವ್ಯಾಪಾರ ಸಂಸ್ಥೆಗಳು ಮುಚ್ಚಬೇಕಾಗುತ್ತದೆ. ಅಲ್ಲದೇ ಪೊಲೀಸರು ಅಲ್ಲಿ ಮುಂಚಿತವಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಇದು ಪ್ರತಿಭಟನೆಗೂ ಕೆಲವು ದಿನಗಳ ಮೊದಲು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ (ಏಜೆನ್ಸೀಸ್).