ಸರಸ್ವತಿ ನದಿಯನ್ನು ಮಲೀನ ಮಾಡುತ್ತಿರುವ ಪ್ರವಾಸಿಗರು
ಉತ್ತರಾಖಂಡ: ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪೌರಾಣಿಕ ನದಿ ಎಂದು ಪೂಜಿಸಲ್ಪಡುವ ನದಗಳಲ್ಲಿ ಸರಸ್ವತಿ ನದಿ ಕೂಡ ಒಂದು. ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದ ಹತ್ತಿರವಿರುವ ಮಾನಾ ಗ್ರಾಮದಲ್ಲಿ ಮಾತ್ರ ಕಣ್ಣಿಗೆ ಕಾಣಿಸುವ ಈ ಗುಪ್ತಗಾಮಿನಿ ನದಿಗೆ, ಪ್ರವಾಸಿಗರು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ಎಸೆಯುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Saraswati River Viral Video) ಆಗಿದೆ.
ಇದನ್ನು ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದು, ಭಕ್ತಿಯ ಹೆಸರಿನಲ್ಲಿ ಪರಿಸರ ಹಾಳು ಮಾಡುತ್ತಿರುವವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಎತ್ತರವಾದ ಜಾಗದಲ್ಲಿ ನಿಂತು ಕೆಳಗೆ ಹರಿಯುತ್ತಿರುವ ಸರಸ್ವತಿ ನದಿಗೆ ಪೂಜಾ ಪ್ರಸಾದ ಹಾಗೂ ಕಸದ ಕವರ್‌ಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು. ಇಷ್ಟೇ ಅಲ್ಲದೆ, ನದಿಯ ಸುತ್ತಮುತ್ತಲಿನ ಜಾಗವೆಲ್ಲಾ ಪ್ರವಾಸಿಗರು ಎಸೆದು ಹೋಗಿರುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಸದಿಂದ ತುಂಬಿಹೋಗಿದೆ.
ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಪವಿತ್ರವಾದ ಜಾಗಕ್ಕೆ ಇಷ್ಟೊಂದು ಅಗೌರವ ತೋರುತ್ತಿರುವುದನ್ನು ಕಂಡು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.
ಇದೇನಾ ಹಿಂದೂ ಸಂಸ್ಕೃತಿ? ಎಂದು ಪ್ರಶ್ನಿಸಿದ ನೆಟ್ಟಿಗರು!
ಈ ವಿಡಿಯೋ ಆನ್‌ಲೈನ್‌ಗೆ ಬರುತ್ತಿದ್ದಂತೆ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ. ಅನೇಕರು ಬೇಜವಾಬ್ದಾರಿ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿ, ದಯವಿಟ್ಟು ಇದರ ಬಗ್ಗೆ ಏನಾದರೂ ಕ್ರಮ ತಗೊಳ್ಳಿ. ಜನರ ಭಕ್ತಿಯೂ ಉಳಿಬೇಕು, ಇತ್ತ ಮಾಲಿನ್ಯವೂ ಆಗಬಾರದು ಎಂದು ಬರೆದಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಸಿಟ್ಟಿನಿಂದ, ಇವರಿಗೆ ಕೇಳಿದರೆ ಪರ್ವತಗಳೇ ದೇವ್ರು, ಗಂಗಾ ನದಿಯೇ ತಾಯಿ ಅಂತಾರೆ. ಆದರೆ ತಮ್ಮದೇ ದೇವತೆಗಳ ಜಾಗವನ್ನು ಇಷ್ಟೊಂದು ಗಲೀಜು ಮಾಡ್ತಾರೆ. ಕೇದಾರನಾಥದಲ್ಲೂ ಇವರು ಹೀಗೆನೇ ಮಾಡೋದು ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ಇನ್ನೂ ಕೆಲವರು ಇದೇನಾ ಹಿಂದೂಗಳ ಆಚರಣೆ ಎಂದು ನೇರವಾಗಿ ಧಾರ್ಮಿಕ ಆಚರಣೆಗಳನ್ನೇ ಪ್ರಶ್ನಿಸಿದ್ದಾರೆ.
ಏನಿದು ಮಾನಾ ಗ್ರಾಮದ ‘ಗೋಚರ’ ಸರಸ್ವತಿ ರಹಸ್ಯ?
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಮಾನಾ ಸಮುದ್ರ ಮಟ್ಟದಿಂದ 3,200 ಮೀಟರ್ ಎತ್ತರದಲ್ಲಿದೆ. ಇದನ್ನು ಹಿಂದೆ ಭಾರತದ ಕೊನೆಯ ಹಳ್ಳಿ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಇದನ್ನು ಭಾರತದ ಮೊದಲ ಹಳ್ಳಿ ಎಂದು ಕರೆಯಲಾಗುತ್ತದೆ. ಪ್ರಸಿದ್ಧ ಬದರಿನಾಥ ದೇವಸ್ಥಾನದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ.
ಹಿಂದೂ ಪುರಾಣಗಳ ಪ್ರಕಾರ, ಸರಸ್ವತಿ ನದಿಯು ಕಣ್ಣಿಗೆ ಕಾಣಿಸದ ಗುಪ್ತಗಾಮಿನಿ (ಭೂಗತ ನದಿ). ಆದರೆ, ಇಡೀ ದೇಶದಲ್ಲೇ ಈ ನದಿಯ ಭೋರ್ಗರೆಯುವ ಉಗಮ ಸ್ಥಾನವನ್ನು ಕಣ್ಣಾರೆ ನೋಡಬಹುದಾದ ಏಕೈಕ ಜಾಗ ಅಂದರೆ ಅದು ಮಾನಾ ಗ್ರಾಮ ಮಾತ್ರ.
ಇಲ್ಲಿನ ಪ್ರಸಿದ್ಧ ವ್ಯಾಸ ಗುಹೆಯ ಪಕ್ಕದಲ್ಲೇ ಕ್ಷೀರಬಿಳಿಯ ಬಣ್ಣದಲ್ಲಿ ಈ ನದಿ ಹುಟ್ಟಿ, ಹರಿದು ಬಂದು ಕೇಶವ ಪ್ರಯಾಗದಲ್ಲಿ ಅಲಕನಂದಾ ನದಿಯೊಂದಿಗೆ ಸೇರುತ್ತದೆ. ಇದಾದ ಬಳಿಕ ಇಡೀ ಭಾರತದಲ್ಲಿ ಈ ನದಿ ಎಲ್ಲಿಯೂ ಮೇಲ್ಮೈಗೆ ಕಾಣಿಸುವುದಿಲ್ಲ. ಮುಂದೆ ನೇರವಾಗಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಗಂಗಾ ಮತ್ತು ಯಮುನಾ ನದಿಗಳೊಂದಿಗೆ ನಿಗೂಢವಾಗಿ ವಿಲೀನಗೊಳ್ಳುತ್ತದೆ ಎನ್ನುತ್ತದೆ ಪುರಾಣ.
ಇಂತಹ ಅಪರೂಪದ ಮತ್ತು ಪವಿತ್ರವಾದ ಹಿಮಾಲಯದ ಸೂಕ್ಷ್ಮ ಪ್ರದೇಶದಲ್ಲಿ ಪ್ರವಾಸಿಗರು ಸ್ವಚ್ಛತೆಯ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಪರಿಸರ ಪ್ರೇಮಿಗಳ ಕಳವಳಕ್ಕೆ ಕಾರಣವಾಗಿದೆ. ಇನ್ನಾದರೂ ಪ್ರವಾಸಿಗರು ಭಕ್ತಿಯ ಜೊತೆಗೆ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಭಿಪ್ರಾಯವಾಗಿದೆ, (ಏಜನ್ಸೀಸ್).