Sushmita Dev | ರಾಜ್ಯಸಭೆಗೆ ಗುಡ್‌ಬೈ ಹೇಳಿ ಅಸ್ಸಾಂ ಸಿಎಂ ಭೇಟಿಯಾದ ಸುಸ್ಮಿತಾ ದೇವ್ 
ದೇಶ

ರಾಜ್ಯಸಭೆಗೆ ಗುಡ್‌ಬೈ ಹೇಳಿ ಅಸ್ಸಾಂ ಸಿಎಂ ಭೇಟಿ; ಕಮಲ ಮುಡಿಯಲು ಸಜ್ಜಾದ್ರಾ ಸುಶ್ಮಿತಾ ದೇವ್..? | Sushmita Dev

Sushmita Dev: ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಮೇಲಿನ ಹಿಡಿತ ಕೈತಪ್ಪುತ್ತಿರುವುದು ಸ್ಪಷ್ಟವಾಗುತ್ತಿದ್ದು, ಟಿಎಂಸಿ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈಗಾಗಲೇ 61 ಶಾಸಕರು ಉಚ್ಚಾಟಿತ ನಾಯಕ ರಿತಬ್ರತಾ ಬ್ಯಾನರ್ಜಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ ಬೆನ್ನಲ್ಲೇ, ಈ ಬಂಡಾಯದ ಕಿಚ್ಚು ಈಗ ಸಂಸತ್ತಿಗೂ ವ್ಯಾಪಿಸಿದೆ.
ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತರಾಗಿದ್ದ ಸುಖೇಂದು ಶೇಖರ್ ರಾಯ್ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೇವಲ ಎರಡ್ಮೂರು ದಿನದಲ್ಲಿ, ಮತ್ತೋರ್ವ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಕೂಡ ಮೇಲ್ಮನೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಬಣಕ್ಕೆ ಎದುರಾದ ಮತ್ತೊಂದು ಬಹುದೊಡ್ಡ ಆಘಾತವಾಗಿದೆ.
ಹಿಂದೆ ಅಸ್ಸಾಂನ ಸಿಲ್ಚಾರ್ ಕ್ಷೇತ್ರದಿಂದ ಕಾಂಗ್ರೆಸ್‌ನ ಲೋಕಸಭಾ ಸಂಸದರಾಗಿದ್ದ ಸುಶ್ಮಿತಾ ದೇವ್ ಅವರು, 2019 ರ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ತೊರೆದು 2021 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಟಿಎಂಸಿಯಲ್ಲಿ ಅತ್ಯಂತ ವೇಗವಾಗಿ ಬೆಳೆದ ಅವರು ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದಲ್ಲದೆ, ರಾಜ್ಯಸಭಾ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ರಾಜ್ಯಸಭೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರು ದೆಹಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿರುವುದು ಭಾರಿ ಕುತೂಹಲ ಮೂಡಿಸಿದೆ. ಈ ದಿಢೀರ್ ಬೆಳವಣಿಗೆಯ ಬೆನ್ನಲ್ಲೇ, ಸುಶ್ಮಿತಾ ದೇವ್ ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿರುವ ಸುಶ್ಮಿತಾ ದೇವ್, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿನಂತಿಸಿದ್ದಾರೆ. ಕಳೆದ 13 ವರ್ಷಗಳಿಂದ ಮೇಲ್ಮನೆಯಲ್ಲಿ ಟಿಎಂಸಿ ಪಕ್ಷದ ಮುಖ್ಯ ಸಚೇತಕರಾಗಿ (ಚೀಫ್ ವಿಪ್) ಜವಾಬ್ದಾರಿ ನಿಭಾಯಿಸುತ್ತಿದ್ದ ಸುಖೇಂದು ಶೇಖರ್ ರಾಯ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದು ಪಕ್ಷಕ್ಕೆ ನೀಡಿದ ಮೊದಲ ದೊಡ್ಡ ಪೆಟ್ಟಾಗಿದ್ದರೆ, ಈಗ ಒಂದು ವಾರದ ಅವಧಿಯಲ್ಲಿ ನಡೆದಿರುವ ಎರಡನೇ ರಾಜೀನಾಮೆ ಇದಾಗಿದೆ.
ಸುಖೇಂದು ಶೇಖರ್ ರಾಯ್ ಮಮತಾ ಬ್ಯಾನರ್ಜಿ ಅವರಿಗೆ ಬರೆದಿದ್ದ ರಾಜೀನಾಮೆ ಪತ್ರದಲ್ಲಿ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಪಕ್ಷದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ಮಹಿಳೆಯರ ಮೇಲಿನ ತೀವ್ರ ದೌರ್ಜನ್ಯ ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗ, ಕೈಗಾರಿಕೆ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲಾ ರಂಗಗಳಲ್ಲೂ ಉಂಟಾಗಿರುವ ಸಂಪೂರ್ಣ ವೈಫಲ್ಯ ಮತ್ತು ತೀವ್ರ ಅರಾಜಕತೆಯನ್ನು ಬಂಗಾಳದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದೇ ವೇಳೆ ಬಿಜೆಪಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದ ಸುಖೇಂದು ಶೇಖರ್, ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಸ್ಥಾನಗಳ ವಿಷಯದಲ್ಲಿ ಅಭೂತಪೂರ್ವ ಮತ್ತು ಬೃಹತ್ ಜಯವನ್ನು ತಂದುಕೊಟ್ಟಿದ್ದಾರೆ. ಹೊಸದಾಗಿ ಚುನಾಯಿತಗೊಂಡಿರುವ ಸರ್ಕಾರವು ತನ್ನ ಚುನಾವಣಾ ಭರವಸೆಗಳಿಗೆ ಅನುಗುಣವಾಗಿ, ಬಂಗಾಳದ ಸಮಗ್ರ ಅಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಲು ಕೆಲಸ ಆರಂಭಿಸಿದೆ ಎಂದಿದ್ದರು.
ಪಕ್ಷದೊಳಗಿನ ಈ ಸರಣಿ ರಾಜೀನಾಮೆಗಳು ಮತ್ತು ಆಡಳಿತ ಪಕ್ಷದ ವಿರುದ್ಧ ಹಿರಿಯ ನಾಯಕರೇ ತಿರುಗಿಬಿದ್ದಿರುವುದು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ(ಏಜೆನ್ಸೀಸ್​​).