Prakash Chik Baraik | ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಕಾಶ್ ಚಿಕ್ ಬರೈಕ್ 
ದೇಶ

ಒಂದೇ ವಾರದಲ್ಲಿ ಟಿಎಂಸಿಯ ಮೂರನೇ ವಿಕೆಟ್ ಪತನ!...ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಕಾಶ್ ಚಿಕ್ ಬರೈಕ್ | Prakash Chik Baraik

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕಳೆದ ಒಂದು ತಿಂಗಳಿನಿಂದ ಸಾಲು ಸಾಲು ಹಿನ್ನಡೆಗಳು ಉಂಟಾಗುತ್ತಿದ್ದು, ಪಕ್ಷದ ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರೈಕ್ (Prakash Chik Baraik) ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಖೇಂದು ಶೇಖರ್ ರಾಯ್ ಮತ್ತು ಸುಸ್ಮಿತಾ ದೇವ್ ಅವರ ಬಳಿಕ ಇತ್ತೀಚಿನ ದಿನಗಳಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಮೂರನೇ ಪ್ರಮುಖ ನಾಯಕ ಇವರಾಗಿದ್ದಾರೆ.
ಬರೈಕ್ ಇಂದು(ಗುರುವಾರ ಜೂ.11) ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯ ಸಭಾಪತಿಗಳನ್ನು ( ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್​) ಅವರನ್ನು ಭೇಟಿಯಾಗಿ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಬರೈಕ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ಗೌರವಾನ್ವಿತ ಮಹೋದಯರೇ, ನಾನು ಈ ಮೂಲಕ ನನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಬೇಕಾಗಿ ವಿನಂತಿ. ನನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ತಮಗೆ, ಗೌರವಾನ್ವಿತ ಉಪಸಭಾಪತಿಗಳಿಗೆ ಮತ್ತು ರಾಜ್ಯಸಭಾ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ. ಪ್ರಕಾಶ್ ಬರೈಕ್ ರಾಜೀನಾಮೆಯೊಂದಿಗೆ, ಮೇಲ್ಮನೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಬಲವು 10ಕ್ಕೆ ಕುಸಿಯಲಿದೆ. ಟಿಎಂಸಿಯ ಸಂಕಷ್ಟ ಇಷ್ಟಕ್ಕೇ ಮುಗಿಯುವಂತೆ ಕಾಣುತ್ತಿಲ್ಲ. ಮೂಲಗಳ ಪ್ರಕಾರ, ಮುಂಬರುವ ವಾರದಲ್ಲಿ ಇನ್ನೂ ಮೂವರು ಟಿಎಂಸಿ ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮತ್ತಷ್ಟು ಬಿಕ್ಕಟ್ಟು ತಂದೊಡ್ಡಬಹುದು.

ಯಾರು ಈ ಪ್ರಕಾಶ್ ಚಿಕ್ ಬರೈಕ್..?

ಪ್ರಕಾಶ್ ಚಿಕ್ ಬರೈಕ್ ಪಶ್ಚಿಮ ಬಂಗಾಳದ ಪ್ರಮುಖ ಬುಡಕಟ್ಟು ನಾಯಕನಾಗಿದ್ದು, ಇವರು ಉತ್ತರ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯ ಸಿಲಿಗುರಿ ಪ್ರದೇಶದವರಾಗಿದ್ದಾರೆ. 2023 ರ ಆಗಸ್ಟ್​​ನಲ್ಲಿ ಟಿಎಂಸಿ ಟಿಕೆಟ್‌ನಿಂದ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಇವರು, ಬುಡಕಟ್ಟು ಸಮುದಾಯದಿಂದ ಮೇಲ್ಮನೆಗೆ ಆಯ್ಕೆಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟಿಎಂಸಿ ಇವರನ್ನು ಅಲಿಪುರ್ದುವಾರ್ ಜಿಲ್ಲಾ ಅಧ್ಯಕ್ಷರನ್ನಾಗಿಯೂ ನೇಮಿಸಿತ್ತು. ಸಂಸತ್ತಿನಲ್ಲಿ ಇವರು ಮುಖ್ಯವಾಗಿ ಚಹಾ ತೋಟದ ಕಾರ್ಮಿಕರ ಹಕ್ಕುಗಳು, ಪ್ರಾವಿಡೆಂಟ್ ಫಂಡ್ (PF) ಸೌಲಭ್ಯಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಬಗ್ಗೆ ಸತತವಾಗಿ ಧ್ವನಿ ಎತ್ತುತ್ತಿದ್ದರು.

ಟಿಎಂಸಿಯಲ್ಲಿ ಮುಂದುವರಿದ ಬಂಡಾಯ

2021 ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದ ಪ್ರಮುಖ ನಾಯಕಿ ಸುಸ್ಮಿತಾ ದೇವ್ ಪಕ್ಷ ತೊರೆದ ಕೇವಲ ಒಂದು ದಿನದೊಳಗೆ ಬರೈಕ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ, ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಕೂಡ ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ದೊಡ್ಡ ಬಂಡಾಯ ಎದ್ದಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಅಧಿಕೃತ ಅಭ್ಯರ್ಥಿ ಶೋವಂದೇಬ್ ಚಟ್ಟೋಪಾಧ್ಯಾಯರನ್ನು ತಿರಸ್ಕರಿಸಿ, ಸುಮಾರು 58 ಟಿಎಂಸಿ ಶಾಸಕರು ನಾಯಕತ್ವದ ವಿರುದ್ಧ ಬಂಡಾಯ ಎದ್ದು ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೆಂಬಲಿಸಿದ್ದಾರೆ(ಏಜೆನ್ಸೀಸ್​).