Suvendu Adhikari | ಬಿಜೆಪಿ ನಾಯಕ ಸುವೇಂದು ಅಧಿಕಾರಿ 
ದೇಶ

ಮುಂದಿನ 24 ಗಂಟೆಯಲ್ಲಿ ಟಿಎಂಸಿ ಸರ್ವನಾಶ... ಬಂಗಾಳ ಗೆದ್ದ ಬೆನ್ನಲ್ಲೇ ಸುವೇಂದು ಅಧಿಕಾರಿ ಸ್ಫೋಟಕ ಎಚ್ಚರಿಕೆ! | Suvendu Adhikari

ಕೊಲ್ಕತ್ತಾ: ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 10,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari), ಈ ಯಶಸ್ಸಿಗೆ ಆ ಭಾಗದ ಹಿಂದೂ ಸಮುದಾಯದ ಬೆಂಬಲವೇ ಕಾರಣ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿ, ಇನ್ನು ಮುಂದೆ ನಂದಿಗ್ರಾಮದ ಜನರ ಸೇವೆಗೆ ಹೆಚ್ಚಿನ ಗಮನ ಹರಿಸುವುದಾಗಿ ಘೋಷಿಸಿದರು. ಇದೇ ವೇಳೆ ಆಡಳಿತಾರೂಢ ಟಿಎಂಸಿ ಪಕ್ಷವನ್ನು ಭ್ರಷ್ಟ ಮತ್ತು ಸಿದ್ಧಾಂತವಿಲ್ಲದ ಕುಟುಂಬ ರಾಜಕಾರಣದ ಪಕ್ಷ ಎಂದು ತೀವ್ರವಾಗಿ ಟೀಕಿಸಿದ ಅವರು, ಈ ಪಕ್ಷವು ಮುಂದಿನ 24 ಗಂಟೆಗಳಲ್ಲಿ ನಾಶವಾಗಲಿದೆ ಎಂಬ ಭವಿಷ್ಯ ನುಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗಳನ್ನು ಈಡೇರಿಸುವುದು ಹಾಗೂ ಪಕ್ಷದ ಪ್ರಣಾಳಿಕೆಯನ್ನು ತಳಮಟ್ಟದಲ್ಲಿ ಜಾರಿಗೆ ತರುವುದೇ ತಮ್ಮ ಮುಂದಿನ ಪ್ರಮುಖ ಗುರಿ ಎಂದು ಅಧಿಕಾರಿ ತಿಳಿಸಿದ್ದಾರೆ. ನಂದಿಗ್ರಾಮದ ಜೊತೆಗೆ ಭಬಾನಿಪುರ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದ ಬಿಜೆಪಿಯ ನಾಯಕ, ಮಮತಾ ಬ್ಯಾನರ್ಜಿ ಭದ್ರಕೋಟೆಯನ್ನು ಭೇದಿಸಿ ಸುಮಾರು 15,000 ಮತಗಳ ಅಂತರದಿಂದ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತ ಸಾಧಿಸಿದೆ. ಈ ಮೂಲಕ ರಾಜ್ಯದಲ್ಲಿ ಟಿಎಂಸಿಯ 15 ವರ್ಷಗಳ ಸುದೀರ್ಘ ಆಳ್ವಿಕೆಯನ್ನು ಕೊನೆಗಾಣಿಸಿ, ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಕಾಂಗ್ರೆಸ್ ಮತ್ತು ಆಮ್ ಜನತಾ ಉನ್ನಯನ್ ಪಕ್ಷ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಉಳಿದಂತೆ ಸಿಪಿಐ(ಎಂ) ಮತ್ತು ಎಐಎಸ್ಎಫ್ ತಲಾ ಒಂದು ಸ್ಥಾನ ಪಡೆದಿವೆ.
ಐತಿಹಾಸಿಕ ಜಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿದರು. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದು, ಮತ್ತೆ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಬಂಗಾಳದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಹೈಕಮಾಂಡ್ ಇನ್ನೂ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ(ಏಜೆನ್ಸೀಸ್​).