No Confidence Motion | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ದೀದಿ ಬೆಂಬಲ 
ದೇಶ

ಓಂ ಬಿರ್ಲಾ ವಿರುದ್ಧ 'ಅವಿಶ್ವಾಸ'ದ ಅಸ್ತ್ರ..ಕೊನೆಗೂ ಮೌನ ಮುರಿದ ಮಮತಾ ಬ್ಯಾನರ್ಜಿ ಹೇಳಿದ್ದೇನು..? | No Confidence Motion

ನವದೆಹಲಿ: ಮಾರ್ಚ್​​ 9 ರಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತ ಭಾರಿ ಸಂಘರ್ಷಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ಸಿಕ್ಕಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ (No Confidence Motion) ಈಗ ಟಿಎಂಸಿ ಕೂಡ ಬೆಂಬಲ ಘೋಷಿಸಿದೆ.
ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೂಚನೆಯಂತೆ ಟಿಎಂಸಿ ಸಂಸದರು ನಿರ್ಣಯದ ಪರವಾಗಿ ಮತ ಚಲಾಯಿಸಲಿದ್ದಾರೆ.
ಕಾಂಗ್ರೆಸ್ ಸಂಸದರಾದ ಮೊಹಮ್ಮದ್ ಜಾವೇದ್, ಕೋಡಿಕುನ್ನಿಲ್ ಸುರೇಶ್ ಮತ್ತು ಮಲ್ಲು ರವಿ ಈ ನಿರ್ಣಯವನ್ನು ಔಪಚಾರಿಕವಾಗಿ ಮಂಡಿಸಲಿದ್ದು, ಸ್ಪೀಕರ್ ಓಂ ಬಿರ್ಲಾ ಆಡಳಿತಾರೂಢ ಬಿಜೆಪಿ ಸರ್ಕಾರದ ಪರವಾಗಿ ಪಕ್ಷಪಾತ ಮಾಡುತ್ತಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬುದು ಪ್ರತಿಪಕ್ಷಗಳ ಪ್ರಮುಖ ಆರೋಪ.
ಮಹಿಳಾ ಸಂಸದರ ವಿರುದ್ಧ ಸ್ಪೀಕರ್ ಅನಗತ್ಯ ಆರೋಪ ಮಾಡಿದ್ದು, ಸಾರ್ವಜನಿಕ ಸಮಸ್ಯೆ ಎತ್ತಿದ ಸಂಸದರನ್ನು ಅಮಾನತುಗೊಳಿಸಿ ಆಡಳಿತ ಪಕ್ಷದ ಸದಸ್ಯರ ತಪ್ಪುಗಳನ್ನು ಕ್ಷಮಿಸುತ್ತಿದ್ದಾರೆ ಎನ್ನುವುದು ವಿರೋಧ ಪಕ್ಷಗಳು ವಾದ.

ನರವಾಣೆ ಬುಕ್​ ವಿವಾದ

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಸಂಘರ್ಷದ ಕುರಿತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅಪ್ರಕಟಿತ ಆತ್ಮಚರಿತ್ರೆಯ ಸಾಲುಗಳನ್ನು ರಾಹುಲ್ ಗಾಂಧಿ ಸದನದಲ್ಲಿ ಉಲ್ಲೇಖಿಸಲು ಪ್ರಯತ್ನಿಸಿದಾಗ ಸಂಸತ್ತಿನಲ್ಲಿ ಗದ್ದಲ ಉಂಟಾಗಿತ್ತು. ಈ ವೇಳೆ ನಿಯಮ ಉಲ್ಲಂಘನೆ ಆರೋಪದಡಿ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದು, ಬೆಂಕಿಗೆ ತುಪ್ಪ ಸುರಿದಂತಾಗಿದೆ, ಈಗ ಇಡೀ ಇಂಡಿಯಾ ಒಕ್ಕೂಟ ಸ್ಪೀಕರ್ ವಿರುದ್ಧ ಒಂದಾಗಿದೆ.

ವಿಪ್​ ಜಾರಿ

ಈ ನಿರ್ಣಾಯಕ ಹೋರಾಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಜ್ಜಾಗಿದ್ದು, ಮಾರ್ಚ್ 9 ರಿಂದ 11 ರವರೆಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಎರಡೂ ಪಕ್ಷಗಳು ತಮ್ಮ ಸಂಸದರಿಗೆ ತ್ರೀ-ಲೈನ್ ವಿಪ್ ಜಾರಿ ಮಾಡಿವೆ. ಅಲ್ಲಿಯವರೆಗೆ ಸ್ಪೀಕರ್ ಕುರ್ಚಿಯಿಂದ ದೂರವಿರುವುದಾಗಿ ಓಂ ಬಿರ್ಲಾ ಘೋಷಿಸಿದ್ದಾರೆ(ಏಜೆನ್ಸೀಸ್​).