ಮಾಜಿ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಟಿಎಂಸಿ ಹೆಸರು ಮತ್ತು ಚಿಹ್ನೆ ವಿವಾದ: ಇತ್ಯರ್ಥಕ್ಕೆ ಚುನಾವಣಾ ಆಯೋಗಕ್ಕೆ ನಾಲ್ಕು ತಿಂಗಳ ಗಡುವು ನೀಡಿದ ಸುಪ್ರೀಂಕೋರ್ಟ್ | Supreme Court

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' ಚಿಹ್ನೆಯ ಕುರಿತು ಎರಡು ಬಣಗಳ ನಡುವಿನ ವಿವಾದದ ಕುರಿತು ಸೋಮವಾರ(ಸೆ. 28) ಸುಪ್ರೀಂಕೋರ್ಟ್, ನಾಲ್ಕು ತಿಂಗಳೊಳಗೆ ಅಂತಿಮ ನಿರ್ಧಾರ ಪ್ರಕಟಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' ಚಿಹ್ನೆಯ ಕುರಿತು ಎರಡು ಬಣಗಳ ನಡುವಿನ ವಿವಾದದ ಕುರಿತು ಸೋಮವಾರ(ಸೆ. 28) ಸುಪ್ರೀಂಕೋರ್ಟ್, ನಾಲ್ಕು ತಿಂಗಳೊಳಗೆ ಅಂತಿಮ ನಿರ್ಧಾರ ಪ್ರಕಟಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಪ್ರಸ್ತುತ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಟಿಎಂಸಿ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ಸ್ಥಗಿತಗೊಳಿಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ನಿರ್ದೇಶನ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾ. ವಿ ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ನಾಲ್ಕು ವಾರಗಳೊಳಗೆ ಚುನಾವಣಾ ಆಯೋಗದ ಮುಂದೆ ಎರಡು ಬಣಗಳು ತಮ್ಮ ವಾದ ಮತ್ತು ಪ್ರತಿವಾದಗಳನ್ನು ಸಲ್ಲಿಸಬೇಕು. ಬಳಿಕ ಮೂರು ತಿಂಗಳೊಳಗೆ ಈ ವಿಷಯದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ವಿಚಾರಣೆಯ ಸಮಯದಲ್ಲಿ, ವಿವಾದವು ಅಂತಿಮವಾಗಿ ಇತ್ಯರ್ಥವಾಗುವವರೆಗೂ ಈ ತಡೆಹಿಡಿಯುವಿಕೆಯು ಒಂದು ಮಧ್ಯಂತರ ವ್ಯವಸ್ಥೆಯಾಗಿದೆ ಎಂದು ಆಯೋಗವು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿತು. ಆಯೋಗದ ಪರ ವಾದಿಸಿದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ವಾದಿಸಿದರು.

ಬ್ಯಾನರ್ಜಿ ಅವರ ಬಣವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವ ಮೂಲಕ ಅಗತ್ಯ ಕ್ರಮ ಕೈಗೊಂಡಿದೆ, ಆದರೆ ಪ್ರತಿಸ್ಪರ್ಧಿ ಬಣವು ಇನ್ನೂ ಅದನ್ನು ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಹೀಗಾಗಿ, ಪ್ರತಿಸ್ಪರ್ಧಿ ಬಣಕ್ಕೆ ತನ್ನ ಉತ್ತರವನ್ನು ಸಲ್ಲಿಸಲು ನ್ಯಾಯಾಲಯವು ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ.

ಇನ್ನೂ ಟಿಎಂಸಿ ಪಕ್ಷದ ಹೆಸರು ಮತ್ತು ಚಿಹ್ನೆ ವಿವಾದದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವವರೆಗೂ ಎರಡೂ ಬಣಗಳಿಗೆ ಚುನಾವಣಾ ಆಯೋಗವು ಪ್ರತ್ಯೇಕ ಹೆಸರುಗಳು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದೆ (ಏಜೆನ್ಸೀಸ್).