ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ 
ದೇಶ

ಡಿ. 06ರಂದು ಬಾಬರಿ ಮಸೀದಿ ಶಂಕು ಸ್ಥಾಪನೆ ಮಾಡುವುದಾಗಿ ಟಿಎಂಸಿ ಶಾಸಕ ವಿವಾದಾತ್ಮಕ ಹೇಳಿಕೆ; ಬಿಜೆಪಿ ಆಕ್ರೋಶ | controversial

ಕೋಲ್ಕತ್ತಾ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡು 33 ವರ್ಷಗಳ ಬಳಿಕ ಡಿ. 06ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ 'ಬಾಬರಿ ಮಸೀದಿ'ಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಹೇಳಿದ್ದಾರೆ. ಇದು ರಾಜಕೀಯ ವಿವಾದಕ್ಕೆ(controversial) ಕಾರಣವಾಗಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಶಾಸಕ ಹುಮಾಯೂನ್ ಕಬೀರ್, ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಪಾಯ ಹಾಕುತ್ತೇವೆ. ಇದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಕಾರ್ಯಕ್ರಮದಲ್ಲಿ ವಿವಿಧ ಮುಸ್ಲಿಂ ನಾಯಕರು ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಶಾಸಕ ಹುಮಾಯೂನ್ ಕಬೀರ್ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ವಕ್ತಾರ ಯಾಸರ್ ಜಿಲಾನಿ, ಟಿಎಂಸಿ ನಾಯಕರು, ವಿಶೇಷವಾಗಿ ಶಾಸಕ ಹುಮಾಯೂನ್ ಕಬೀರ್ ದ್ವೇಷದ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಕೇವಲ ತುಷ್ಟೀಕರಣಕ್ಕಾಗಿ ರಾಜಕೀಯ ಮಾಡುತ್ತಾರೆ. ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಟಿಎಂಸಿಯನ್ನು ತಿರಸ್ಕರಿಸುತ್ತಾರೆ. ಇಲ್ಲಿ ರಾಜಕೀಯ ಬದಲಾವಣೆಯ ಅಲೆ ಏಳುತ್ತಿದೆ ಎಂದು ಅವರಿಗೆ ತಿಳಿದಿದೆ. ಈ ಹಿನ್ನೆಲೆ ಹಿರಿಯ ಟಿಎಂಸಿ ನಾಯಕರು ತಮ್ಮ ಮತ ಬ್ಯಾಂಕ್ ಅನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಇನ್ನೂ ಕಾಂಗ್ರೆಸ್ ಸಂಸದ ಸುರೇಂದ್ರ ರಜಪೂತ್ ಮಾತನಾಡಿ, ಯಾರಾದರೂ ಮಸೀದಿ, ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳನ್ನು ನಿರ್ಮಿಸುತ್ತಿದ್ದರೆ, ಇದರಲ್ಲಿ ವಿವಾದಾತ್ಮಕವಾದದ್ದು ಏನು? ಇದನ್ನು ಏಕೆ ವಿವಾದದ ವಿಷಯವನ್ನಾಗಿ ಮಾಡಲಾಗುತ್ತಿದೆ? ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಪೂಜಾ ಸ್ಥಳಗಳನ್ನು ನಿರ್ಮಿಸುವ ಹಕ್ಕಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).