Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ಬಿಜೆಪಿ ಅಲೆ ನೋಡಿ ಟಿಎಂಸಿ ಬೆದರಿದೆ...ನುಸುಳುಕೋರರಿಗೆ ಗೇಟ್ ಪಾಸ್ ನೀಡುವುದು ಪಕ್ಕಾ ಎಂದ ಪ್ರಧಾನಿ ಮೋದಿ | Narendra Modi

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದಿನೇ ದಿನೇ ಜನಬೆಂಬಲ ಹೆಚ್ಚುತ್ತಿರುವುದನ್ನು ಕಂಡು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈಗ ತೀವ್ರ ಆತಂಕಕ್ಕೆ ಒಳಗಾಗಿ ಪ್ಯಾನಿಕ್ ಮೂಡ್‌ನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏ.11) ಟೀಕಿಸಿದ್ದಾರೆ. ಪುರ್ಬಾ ಬರ್ಧಮಾನ್‌ನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದ ಅಭಿವೃದ್ಧಿ ಮತ್ತು ಭದ್ರತೆಯ ದೃಷ್ಟಿಯಿಂದ ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಲಾಗುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಅಂತ್ಯ ಹಾಡುವುದಾಗಿ ಹಾಗೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನುಸುಳುಕೋರರ ವಿರುದ್ಧ ಕಠಿಣ ನಿಲುವು

ಅಕ್ರಮ ನುಸುಳುವಿಕೆಯ ಬಗ್ಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಹೊರಹಾಕಲು ಬಿಜೆಪಿ ಬದ್ಧವಾಗಿದ್ದು, ಅಕ್ರಮವಾಗಿ ನೆಲೆಸಲು ನೆರವು ಮತ್ತು ರಾಜಕೀಯ ಆಶ್ರಯ ನೀಡಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಇಂತಹ ಅಕ್ರಮ ನುಸುಳುವಿಕೆಯನ್ನು ವಿರೋಧಿಸುತ್ತವೆ ಎಂಬುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಭ್ರಷ್ಟಾಚಾರದ ವಿರುದ್ಧ ಶ್ವೇತಪತ್ರ

ಟಿಎಂಸಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಮಾತನಾಡಿದ ಪ್ರಧಾನಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಟಿಎಂಸಿಯ ಪ್ರತಿಯೊಬ್ಬ ಭ್ರಷ್ಟ ಶಾಸಕ, ಸಚಿವ ಹಾಗೂ ಅವರ ಬೆಂಬಲಿತ ಸಿಂಡಿಕೇಟ್ ಗೂಂಡಾಗಳ ವಿರುದ್ಧ ಶ್ವೇತಪತ್ರ ಹೊರಡಿಸಲಾಗುವುದು ಎಂದು ಘೋಷಿಸಿದರು. ರಾಜಕೀಯ ಹಿಂಸಾಚಾರದ ಘಟನೆಗಳ ಕುರಿತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ಆಯೋಗವನ್ನು ರಚಿಸಿ, ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಶಿಕ್ಷೆಯಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರಂಭಿಸಿರುವ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ ಮೋದಿ, ಆ ಯೋಜನೆಗಳಲ್ಲಿ ನಡೆಯುತ್ತಿರುವ ಲೂಟಿ ಮತ್ತು ಭ್ರಷ್ಟಾಚಾರವನ್ನು ಮಾತ್ರ ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದರು. ಇದರೊಂದಿಗೆ ಬಿಜೆಪಿ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕೇಂದ್ರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಿದೆ ಎಂದು ಭರವಸೆ ನೀಡಿದರು.

ಪಾರದರ್ಶಕತೆಗೆ ಆದ್ಯತೆ

ರಾಜ್ಯದಲ್ಲಿ ನಡೆಯುತ್ತಿರುವ ಸಿಂಡಿಕೇಟ್ ರಾಜ್​ಗೆ ಮುಕ್ತಿ ಹಾಡಿ, ಪ್ರತಿಯೊಂದು ಸರ್ಕಾರಿ ಕಾಮಗಾರಿಗಳಿಗೆ ಪಾರದರ್ಶಕ ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದು, ಮರಳು ಗಣಿಗಾರಿಕೆಯ ಮೇಲೆ ಹಿಡಿತ ಸಾಧಿಸಲು ಟಿಎಂಸಿ ಪೋಷಿತ ವ್ಯಕ್ತಿಗಳು ನಡೆಸುತ್ತಿರುವ ಆಂತರಿಕ ಸಂಘರ್ಷಗಳು ರಾಜ್ಯದ ಶಾಂತಿಗೆ ಭಂಗ ತರುತ್ತಿವೆ. ಕಟ್ವಾದಲ್ಲಿ ನಡೆದ ಸ್ಫೋಟದ ಘಟನೆಗಳು ಇದಕ್ಕೆ ಜೀವಂತ ಸಾಕ್ಷಿಯಾಗಿದ್ದು, ಈ ರೀತಿಯ ಅಪರಾಧ ಚಟುವಟಿಕೆಗಳನ್ನು ಬಿಜೆಪಿ ಸರ್ಕಾರವು ಹತ್ತಿಕ್ಕಲಿದೆ ಎಂದು ತಿಳಿಸಿದರು.
ಏಪ್ರಿಲ್ 23 ಮತ್ತು 29 ರಂದು ಬಂಗಾಳದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).