Jahangir Khan Withdraws | ವಿಶೇಷ ಪ್ಯಾಕೇಜ್ ನೆಪವೊಡ್ಡಿ ಕಣದಿಂದ ಹಿಂದೆ ಸರಿದ ಜಹಾಂಗೀರ್ ಖಾನ್ 
ದೇಶ

ಸಿಎಂ ನೀಡಿದ 'ಸ್ಪೆಷಲ್ ಆಫರ್​'ನಿಂದ ಕಣದಿಂದ ಹಿಂದೆ ಸರಿದೆ ಎಂದ ಖಾನ್; ಏಜೆಂಟರೇ ಸಿಗದೆ ಓಡಿಹೋದ ಎಂಬ ಸುವೇಂದು ಮಾತಿಗೆ ಟಿಎಂಸಿ ಆಕ್ರೋಶ | Jahangir Khan Withdraws

Jahangir Khan Withdraws: ಪಶ್ಚಿಮ ಬಂಗಾಳದ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನದ ಪ್ರಚಾರದ ಕೊನೆಯ ದಿನ ತೃಣಮೂಲ ಕಾಂಗ್ರೆಸ್​​ಗೆ ಭಾರಿ ಹೊಡೆತ ಬಿದ್ದಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಜಹಾಂಗೀರ್ ಖಾನ್ ಮಂಗಳವಾರ ಇದ್ದಕ್ಕಿದ್ದಂತೆ ತಾವು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ.
ತಮ್ಮ ನಿರ್ಧಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಹಾಂಗೀರ್ ಖಾನ್, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಫಾಲ್ತಾ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ನೀಡಿರುವ ಭರವಸೆಯಿಂದಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಫಾಲ್ತಾ ಕ್ಷೇತ್ರವನ್ನು ಗೋಲ್ಡ್​​ ಫಾಲ್ತಾವನ್ನಾಗಿ ಮಾಡುವುದು ತಮ್ಮ ಕನಸಾಗಿತ್ತು ಎಂದಿರುವ ಖಾನ್​, ಈ ಮಣ್ಣಿನ ಮಗನಾಗಿ ಇಲ್ಲಿನ ಶಾಂತಿ ಮತ್ತು ಸಮೃದ್ಧಿಗಾಗಿ ಈ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಇತ್ತ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಪರವಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬಿರುಸಿನ ಪ್ರಚಾರ ನಡೆಸುತ್ತಿದ್ದ ವೇಳೆಯಲ್ಲೇ ಈ ಬೆಳವಣಿಗೆ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಟಿಎಂಸಿ ವಕ್ತಾರ ಜಯ್ ಪ್ರಕಾಶ್ ಮಜುಂದಾರ್ ನಿರಾಕರಿಸಿದ್ದಾರೆ. ಮತ್ತೊಂದೆಡೆ, ಕಣದಿಂದ ಹಿಂದೆ ಸರಿಯುವುದು ಅಭ್ಯರ್ಥಿಯ ವೈಯಕ್ತಿಕ ನಿರ್ಧಾರ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಸುವೇಂದು ಅಧಿಕಾರಿ ಹೇಳಿದ್ದೇನು..?

ಮೇ 21 ರಂದು ನಡೆಯಲಿರುವ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನದ ಹಿನ್ನೆಲೆಯಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಣದಿಂದ ಹಿಂದೆ ಸರಿದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಹಾಂಗೀರ್ ಖಾನ್​ಗೆ ಚುನಾವಣಾ ಕಣದಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ಯಾವುದೇ ದಾರಿ ಇರಲಿಲ್ಲ, ಫಾಲ್ತಾ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲೂ ಕೂರಲು ಟಿಎಂಸಿಗೆ ಪೋಲಿಂಗ್ ಏಜೆಂಟರೇ ಸಿಕ್ಕಿಲ್ಲ. ಪಕ್ಷದ ಕಾರ್ಯಕರ್ತರು ಯಾರು ಕೂಡ ಅವರ ಪರವಾಗಿ ನಿಲ್ಲಲು ಸಿದ್ಧರಿರಲಿಲ್ಲ. ಈ ಅಸಹಾಯಕತೆಯಿಂದಾಗಿಯೇ ಚುನಾವಣಾ ಅಖಾಡದಿಂದ ಓಡಿಹೋಗಲು ನಿರ್ಧರಿಸಿದ್ದಾರೆ ಎಂದು ಸುವೇಂದು ಅಧಿಕಾರಿ ಲೇವಡಿ ಮಾಡಿದ್ದಾರೆ.

ಬೆದರಿಕೆ ರಾಜಕಾರಣ ಎಂದು ಟಿಎಂಸಿ ಆರೋಪ

ಈ ಇಡೀ ಬೆಳವಣಿಗೆಯ ಕುರಿತು ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿರುವ ಟಿಎಂಸಿ, ಜಹಾಂಗೀರ್ ಖಾನ್​ರ ನಿರ್ಧಾರವು ವೈಯಕ್ತಿಕವಾಗಿದ್ದು ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. ಮೇ 4 ರ ಫಲಿತಾಂಶದ ಬಳಿಕ ಫಾಲ್ತಾ ಕ್ಷೇತ್ರದಲ್ಲಿ 100 ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಪಕ್ಷವು, ಇಷ್ಟೆಲ್ಲಾ ದೌರ್ಜನ್ಯಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದು ದೂರಿದೆ. ಅಂತಿಮವಾಗಿ ಇಂತಹ ತೀವ್ರ ರಾಜಕೀಯ ಒತ್ತಡಗಳಿಗೆ ಮಣಿದು ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿದ್ದು, ಬಿಜೆಪಿಯ ಈ ದಬ್ಬಾಳಿಕೆಯ ವಿರುದ್ಧ ದೀದಿ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಕಳೆದ ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಫಾಲ್ತಾ ಕ್ಷೇತ್ರದಲ್ಲಿ ವ್ಯಾಪಕ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲೂ ಮೇ 21 ರಂದು ಮರುಮತದಾನಕ್ಕೆ ಆದೇಶಿಸಿತ್ತು. ಈ ಚುನಾವಣೆಗೂ ಮುನ್ನ ವಿಕ್ಷಕರಾಗಿ ಬಂದಿದ್ದ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಹಾಂಗೀರ್ ಖಾನ್ ಆರೋಪಿಸುತ್ತಾ, ಇಂತಹ ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಎಂದು ಸವಾಲು ಹಾಕಿದ್ದರು. ಈ ನಡುವೆ ಕಲ್ಕತ್ತಾ ಹೈಕೋರ್ಟ್ ಜಹಾಂಗೀರ್ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಮೇ 26 ರವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಡೈಮಂಡ್ ಹಾರ್ಬರ್ ರ‍್ಯಾಲಿಯಲ್ಲಿ ಜಹಾಂಗೀರ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿಂದೆ ತಾವೊಬ್ಬ ಪುಷ್ಪಾ ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದ ಖಾನ್‌ನನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಮುಖ್ಯಮಂತ್ರಿಗಳು, ಆ ದರೋಡೆಕೋರ ಪುಷ್ಪಾ ಈಗ ಎಲ್ಲೂ ಕಾಣಿಸುತ್ತಿಲ್ಲ ಏಕೆ? ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2021 ರಲ್ಲಿ ಘೋಷಿಸಿದ್ದ 19 ಕುಖ್ಯಾತ ಅಪರಾಧಿಗಳ ಪಟ್ಟಿಯಲ್ಲಿ ಈ ಜಹಾಂಗೀರ್ ಕೂಡ ಒಬ್ಬನಾಗಿದ್ದ, ಆತನನ್ನು ನನಗೆ ಬಿಡಿ, ನಾನು ಸರಿಯಾಗಿ ಗಮಿನಿಸಿಕೊಳ್ಳುತ್ತೇನೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದರು. ಸಿಎಂ ಅವರ ಈ ಆಕ್ರೋಶದ ನುಡಿಗಳ ಬೆನ್ನಲ್ಲೇ ಟಿಎಂಸಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದರೆ, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿತ್ತು. ಈ ಮರುಚುನಾವಣೆಯ ಫಲಿತಾಂಶವು ಮೇ 24 ರಂದು ಪ್ರಕಟವಾಗಲಿದೆ(ಏಜೆನ್ಸೀಸ್​​).