ದೇಶ

ತಿರುಪ್ಪರಂಕುಂದ್ರಂ ವಿವಾದ: ದೀಪ ಬೆಳಗಿಸದ್ದಕ್ಕೆ ಸುಪ್ರೀಂ​ನಲ್ಲಿ ಕ್ಷಮೆಯಾಚಿಸಿದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ | Supreme Court

ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತೂನ್'ನಲ್ಲಿ ಒಂದು ಬಾರಿ ಸಾಂಪ್ರದಾಯಿಕ ಕಾರ್ತಿಕ ದೀಪ ಹಚ್ಚಲು ನೀಡಿದ್ದ ಅನುಮತಿಯನ್ನು ಜಾರಿಗೊಳಿಸುವಲ್ಲಿ ವಿಫಲವಾದ ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಬುಧವಾರ(ನ. 25) ಸುಪ್ರೀಂಕೋರ್ಟ್ ಹೇಳಿದೆ.

ನವದೆಹಲಿ: ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತೂನ್'ನಲ್ಲಿ ಒಂದು ಬಾರಿ ಸಾಂಪ್ರದಾಯಿಕ ಕಾರ್ತಿಕ ದೀಪ ಹಚ್ಚಲು ನೀಡಿದ್ದ ಅನುಮತಿಯನ್ನು ಜಾರಿಗೊಳಿಸುವಲ್ಲಿ ವಿಫಲವಾದ ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಬುಧವಾರ(ನ. 25) ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠದ ಮುಂದೆ, ಈ ವಿಷಯ ಪ್ರಸ್ತಾಪಿಸಿದಾಗ, ಮಂಗಳವಾರ ನಿಗದಿತ ಸ್ಥಳದಲ್ಲಿ ದೀಪವನ್ನು ಬೆಳಗಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಮತ್ತು ಕ್ಷಮೆಯಾಚನೆ ಮಾಡಿದೆ.

ಈ ವಿಷಯಕ್ಕೆ ಸಂಬಂಧಿಸಿದ ಬೆಳವಣಿಗೆಗಳ ವಿವರಗಳನ್ನು ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸಿದರು. ಮತ್ತು ಅದನ್ನು ದಾಖಲಿಸಿಕೊಳ್ಳುವಂತೆ ಪೀಠವನ್ನು ಕೋರಿದರು.

ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಸಲ್ಲಿಸಿದ ವರದಿಯಲ್ಲಿ, ದೇವಾಲಯದ ಆಡಳಿತ ಮಂಡಳಿಯು ಅಧಿಕೃತಗೊಳಿಸಿದ ಸೀಮಿತ ತಂಡದ ಮೂಲಕ 'ದೀಪತೂನ್'ನಲ್ಲಿ ದೀಪ ಬೆಳಗಿಸಲು ಸುಪ್ರೀಂಕೋರ್ಟ್ ನವೆಂಬರ್ 20 ರಂದು ನೀಡಿದ್ದ ಆದೇಶವನ್ನು ಜಾರಿಗೊಳಿಸಲು ಜಿಲ್ಲಾಡಳಿತವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿತ್ತು ಎಂದು ತಿಳಿಸಲಾಗಿದೆ.

ಆದರೆ, ದೇವಾಲಯದ ಟ್ರಸ್ಟಿಗಳ ಮಂಡಳಿಯು ಈ ಕಾರ್ಯಕ್ಕಾಗಿ ಪ್ರಸ್ತಾಪಿಸಲಾದ ತಂಡಕ್ಕೆ ಅನುಮತಿ ನೀಡಲಿಲ್ಲ. ಬದಲಾಗಿ, ಸಾಂಪ್ರದಾಯಿಕ ಸ್ಥಳದಲ್ಲೇ 'ಕಾರ್ತಿಕ ಮಹಾದೀಪಂ' ಬೆಳಗಿಸುವ ತಮ್ಮ ವಾಡಿಕೆಯ ಪದ್ಧತಿಯನ್ನೇ ಅನುಸರಿಸಲು ನಿರ್ಧರಿಸಿತು. ಇದರಿಂದಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

ಇದೇ ವೇಳೆ 'ದೀಪತೂನ್'ನಲ್ಲಿ ದೀಪ ಬೆಳಗಲು ಅನುಮತಿ ಕೋರಿದ್ದ ರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಗುರು ಕೃಷ್ಣ ಕುಮಾರ್, ಈ ಬೆಳವಣಿಗೆ ಅತ್ಯಂತ ದುರದೃಷ್ಟಕರ, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿಯೇ ಪಾಲಿಸಿಲ್ಲ ಎಂದು ಆರೋಪಿಸಿದರು.

ಮದ್ರಾಸ್ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರವು, ನಿಷೇಧಾಜ್ಞೆಗಳು ಜಾರಿಯಲ್ಲಿವೆ ಮತ್ತು ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ವಿವಾದಿತ ಸ್ಥಳದಲ್ಲಿ ದೀಪ ಬೆಳಗಲು ಅವಕಾಶವಿಲ್ಲ ಎಂದು ತಿಳಿಸಿತ್ತು ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಅಧಿಕಾರಿಗಳು ತಂತ್ರಗಳು ಮತ್ತು ಉಪಾಯಗಳನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ತಪ್ಪಿಸಿದ್ದಾರೆ ಎಂದು ವಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸುವುದಾಗಿ ರಾಜ್ಯ ಸರ್ಕಾರವು ಕೊನೆಯ ಕ್ಷಣದವರೆಗೂ ಮದ್ರಾಸ್ ಹೈಕೋರ್ಟ್‌ಗೆ ಪದೇ ಪದೇ ಭರವಸೆ ನೀಡಿತ್ತು ಎಂಬುದನ್ನೂ ಅರ್ಜಿದಾರರ ಪರ ವಕೀಲರು ಎತ್ತಿ ತೋರಿಸಿದರು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೈಗೊಳ್ಳುವಂತೆ ಅವರು ಪೀಠವನ್ನು ಕೋರಿದ್ದಾರೆ.

ಬಳಿಕ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಹೇಳಿದಾಗ, ಪೀಠವು, ಅದನ್ನು ಸಲ್ಲಿಸಿ, ನಂತರ ನೋಡೋಣ ಎಂದು ಹೇಳಿತು. ನ್ಯಾಯಾಂಗ ನಿಂದನೆ ಅರ್ಜಿಯನ್ನು ಆಲಿಸುವುದಾಗಿ ಮತ್ತು ರಾಜ್ಯ ಸರ್ಕಾರದ ಸ್ಥಿತಿಗತಿ ವರದಿಯನ್ನು ಪರಿಶೀಲಿಸುವುದಾಗಿ ಇದೇ ವೇಳೆ ತಿಳಿಸಿತು.

ಇನ್ನೂ ಕಳೆದ ವರ್ಷ ದೀಪ ಬೆಳಗಿಸಲು ಅನುಮತಿ ನೀಡುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧದ ಮುಖ್ಯ ಅರ್ಜಿಯನ್ನು ಮುಂದಿನ ವರ್ಷದ ಜನವರಿಯಲ್ಲಿ ಅಂತಿಮ ವಿಚಾರಣೆಗೆ ನಿಗದಿಪಡಿಸಲಾಗಿದೆ (ಏಜೆನ್ಸೀಸ್).