

ಚೆನ್ನೈ: ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತೂನ್ನಲ್ಲಿ ಒಂದು ಬಾರಿ ದೀಪ ಹಚ್ಚಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಧಿಕ್ಕರಿಸಿದೆ. ಮತ್ತು ಪ್ರತಿ ವರ್ಷದ ಸಂಪ್ರದಾಯದಂತೆ ಉಚಿಪಿಳ್ಳೈಯರ್ ದೇವಸ್ಥಾನದ ಬಳಿಯ ಸಾಂಪ್ರದಾಯಿಕ ಸ್ಥಳದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ.
ಎಕ್ಸ್ನಲ್ಲಿ ತಮಿಳುನಾಡು ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ವಿಸಿಕೆ ಸಂಸ್ಥಾಪಕ ಮತ್ತು ಸಂಸದ ತೋಲ್ ತಿರುಮಾವಲವನ್, ಮಧುರೈ ಜಿಲ್ಲಾಧಿಕಾರಿಗಳು ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳು, ಪ್ರತಿ ವರ್ಷದ ಸಂಪ್ರದಾಯದಂತೆ ಉಚಿಪಿಳ್ಳೈಯರ್ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಭವ್ಯವಾದ ದೀಪವನ್ನು ಬೆಳಗಿಸಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಮುಂದುವರೆದು, ಸಂಘ ಪರಿವಾರದ ಪಿತೂರಿಯನ್ನು ವಿಫಲಗೊಳಿಸಿ, ತಮಿಳುನಾಡಿನಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಗೌರವಾನ್ವಿತ ಸಿಎಂ ವಿಜಯ್ ಅವರಿಗೆ ಅಭಿನಂದನೆಗಳು. ಸಂಘ ಪರಿವಾರದ ನೆಟ್‌ವರ್ಕ್ ರಾಜಕೀಯದ ಬಲವನ್ನು ಅರ್ಥಮಾಡಿಕೊಂಡವರಿಗೆ ಮಾತ್ರ, ಇದನ್ನು ಸಾಧಿಸಲು ಎದುರಿಸಬೇಕಾದ ಸವಾಲುಗಳ ಅರಿವಾಗುತ್ತದೆ ಎಂದಿದ್ದಾರೆ.
ಇದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿರುವ ತೋಲ್ ತಿರುಮಾವಲವನ್, ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವನ್ನು ಪಾಲಿಸುವುದು ಜಿಲ್ಲಾಧಿಕಾರಿಗಳ ಕರ್ತವ್ಯ ನಿಜ. ಆದರೆ ಅವರು ನ್ಯಾಯಾಧೀಶರಂತೆ ವರ್ತಿಸಲು ಸಾಧ್ಯವಿಲ್ಲ. ದಾಖಲೆಗಳು, ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ತೀರ್ಪು ನೀಡುವ ಅಧಿಕಾರ ನ್ಯಾಯಾಧೀಶರಿಗೆ ಮಾತ್ರ ಸೀಮಿತವಾಗಿರುತ್ತದೆ.
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಆ ರೀತಿ ಕಾರ್ಯನಿರ್ವಹಿಸಲು ಬರುವುದಿಲ್ಲ. ಅವರು ರಾಜ್ಯ ಸರ್ಕಾರದ ನಿಲುವನ್ನೂ ಪರಿಗಣಿಸಬೇಕಾಗುತ್ತದೆ. ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಇರುವುದು ರಾಜ್ಯ ಸರ್ಕಾರಕ್ಕೆ ಮಾತ್ರ.
ಹೀಗಾಗಿ, ನ್ಯಾಯಾಂಗದ ಭಯೋತ್ಪಾದನೆಗೆ ಮಣಿಯದೆ ರಾಜ್ಯ ಸರ್ಕಾರ ಇದನ್ನು ಧೈರ್ಯವಾಗಿ ಎದುರಿಸಬೇಕು. ತಮಿಳುನಾಡಿನ ಭವಿಷ್ಯ ಮತ್ತು ಜನರ ಹಿತದೃಷ್ಟಿಯಿಂದ ತಿರುಪ್ಪರಂಕುಂದ್ರಂನಲ್ಲಿ ನ್ಯಾಯವನ್ನು ಎತ್ತಿಹಿಡಿಯಲು ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ (ಏಜೆನ್ಸೀಸ್).