ಆಪ್​ ತೊರೆದ ಬೆನ್ನಲ್ಲೇ ಬಿಜೆಪಿ ಸೇರಿದ ರಾಘವ್ ಚಡ್ಡಾ ಸೇರಿ ಮೂವರು ಸಂಸದರು 
ದೇಶ

ಆಪ್​ ತೊರೆದ ಬೆನ್ನಲ್ಲೇ ಬಿಜೆಪಿ ಸೇರಿದ ರಾಘವ್ ಚಡ್ಡಾ ಸೇರಿ ಮೂವರು ರಾಜ್ಯಸಭಾ ಸಂಸದರು | Raghav Chadha

ನವದೆಹಲಿ: ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಇಂದು(ಏ. 24) ಆಪ್​ ಪಕ್ಷಕ್ಕೆ ರಾಜೀನಾಮೆ ನೀಡಿ ನಾನೂ ಸೇರಿ ಪಕ್ಷದ ಏಳು ಸಂಸದರು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದ ಸಂಸದ ರಾಘವ್ ಚಡ್ಡಾ, ಸಂಜೆ ಸಂಸದರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಬಿಜೆಪಿ ಸೇರಿದ್ದಾರೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಅವರು ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಹಾಗೂ ಪಾಠಕ್​ಗೆ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಉಳಿದ ನಾಲ್ವರು ಸಂಸದರಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ ಹಾಗೂ ವಿಕ್ರಮ್ ಸಾಹ್ನಿ ನಂತರ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದ ಸಂಸದ ರಾಘವ್ ಚಡ್ಡಾ, ಸಂವಿಧಾನದ ಪ್ರಕಾರ ಒಂದು ಪಕ್ಷದ ಒಟ್ಟು ಸಂಸದರಲ್ಲಿ ಮೂರನೇ ಎರಡರಷ್ಟು ಜನರು ಇನ್ನೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು. ಈ ಸಂಬಂಧ ನಾವು ಇಂದು ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಪತ್ರವನ್ನು ಸಲ್ಲಿಸಿದ್ದೇವೆ. ಈ ಹಿನ್ನೆಲೆ ನಾನೂ ಸೇರಿ ಇತರೆ ಆರು ಸಂಸದರು ಬಿಜೆಪಿ ಸೇರ್ಪಡೆಗೊಳ್ಳಲಿದ್ದೇವೆ ಎಂದು ಘೋಷಣೆ ಮಾಡಿದ್ದರು.
ಆಪ್​ನ 10 ರಾಜ್ಯಸಭಾ ಸಂಸದರಲ್ಲಿ ಏಳು ಮಂದಿ ಬಿಜೆಪಿಗೆ ಮತಾಂತರಗೊಂಡಿರುವುದರಿಂದ, ಸಂಜಯ್ ಸಿಂಗ್, ಸಂತ ಬಲ್ಬೀರ್ ಸಿಂಗ್ ಸೀಚೆವಾಲ್ ಮತ್ತು ಎನ್ ಡಿ ಗುಪ್ತಾ ಎಂಬ ಮೂವರು ಮಾತ್ರ ಮೇಲ್ಮನೆಯಲ್ಲಿ ಉಳಿದಿದ್ದಾರೆ. ಪಕ್ಷಾಂತರಗೊಂಡ ಸಂಸದರ ಸಂಖ್ಯೆ ಮೂರನೇ ಎರಡರಷ್ಟು ಹೆಚ್ಚಿರುವುದರಿಂದ ಪಕ್ಷಾಂತರ ವಿರೋಧಿ ಕಾನೂನು ಅನ್ವಯವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಆಪ್​ ಬಿಟ್ಟ ರಾಘವ್ ಚಡ್ಡಾ ಹೇಳಿದ್ದೇನು?

ದೆಹಲಿಯಲ್ಲಿ ನಡೆಸಿ ಸುದ್ದಿಗೋಷ್ಠಿ ಮಾತನಾಡಿದ ಚಡ್ಡಾ, ಒಬ್ಬ ಸರಿಯಾದ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದ. ಈ ಎಎಪಿಯ ಬೆಳವಣಿಗೆಗೆ ನನ್ನ 15 ವರ್ಷಗಳ ಯೌವನ, ಬೆವರು, ರಕ್ತವನ್ನು ನೀಡಿದ್ದೇನೆ. ಇಂತಹ ಒಂದು ಪಾರ್ಟಿ, ಈಗ ತನ್ನ ತತ್ವ, ಮೌಲ್ಯಗಳು ಮತ್ತು ಮೂಲ ನೈತಿಕತೆಯನ್ನೇ ಮರೆತು, ವಿಮುಖವಾಗಿ ಸಾಗುತ್ತಿರುವುದು ನೋಡಲು ಅಸಾಧ್ಯ. ರಾಷ್ಟ್ರದ ಹಿತಾಸಕ್ತಿಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದರು.
ನಾನು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಕ್ಕೆ ಅಸಲಿ ಕಾರಣವೇ ಬೇರೆ. ಅವರ ಪಾಪದ ಕೃತ್ಯಗಳಲ್ಲಿ ಭಾಗಿಯಾಗಲು ನನ್ನ ಮನಸ್ಸು ಒಪ್ಪಲಿಲ್ಲ. ಎಎಪಿ ತಾಳಕ್ಕೆ ಕುಣಿಯದ ಕಾರಣ, ಅವರ ಸ್ನೇಹಕ್ಕೆ ನಾನು ಅರ್ಹನಾಗಿರಲಿಲ್ಲ. ಈ ಸಂದರ್ಭದಲ್ಲಿ, ನಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿದ್ದವು. 15ರಿಂದ 16 ವರ್ಷಗಳಲ್ಲಿ ನಮ್ಮ ಸಾರ್ವಜನಿಕ ರಾಜಕೀಯ ಕೆಲಸವನ್ನು ತ್ಯಜಿಸುವುದು ಅಥವಾ ನಮ್ಮ ಶಕ್ತಿ ಮತ್ತು ಅನುಭವದೊಂದಿಗೆ ಪಾಸಿಟಿವ್​ ಆಗಿ ರಾಜಕೀಯ ಮುಂದುವರಿಸುವುದು ಮಾತ್ರ ಎಂದಿದ್ದಾರೆ (ಏಜೆನ್ಸೀಸ್).