Women Reservation Bill Defeated
ದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಮತ್ತು ನಾಟಕೀಯ ಬೆಳವಣಿಗೆಯೊಂದರಲ್ಲಿ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳು ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿ ಸೋಲನ್ನು ಅನುಭವಿಸಿದ್ದು (Women Reservation Bill Defeated), ಈ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯನ್ನುಂಟಾಗಿದೆ.
ಸಂಸತ್ತಿನಲ್ಲಿ ನಡೆದ ಮತದಾನದ ವಿವರಗಳ ಪ್ರಕಾರ, ಚರ್ಚೆಯ ಬಳಿಕ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರು. ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (ಅಂದರೆ ಸುಮಾರು 326 ಮತಗಳು) ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ ಚಲಾವಣೆಯಾಗಿದ್ದು 298 ಮತಗಳು.
ಇಂಡಿಯಾ ಕೂಟದ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೊಸ ಜನಗಣತಿಯಿಲ್ಲದೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಇದು ಒಬಿಸಿ ಸಮುದಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ವಾದಿಸಿದವು. 2029ರ ಚುನಾವಣೆಯಿಂದ ಮೀಸಲಾತಿ ಜಾರಿಯಾಗಲಿದೆ ಎಂಬ ಸರ್ಕಾರದ ಪ್ರಸ್ತಾಪವನ್ನು ಚುನಾವಣಾ ಗಿಮಿಕ್ ಎಂದು ಕರೆದಿದ್ದ ವಿಪಕ್ಷಗಳು, ಅಂತಿಮವಾಗಿ ಸದನದಲ್ಲಿ ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ.
ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಹಿಂಪಡೆದಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದು, ಸದನವನ್ನು ಶನಿವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು(ಏಜೆನ್ಸೀಸ್).